Tuesday, June 7, 2011

ಅಭಿವೃದ್ಧಿಯೊಂದೇ ಮಂತ್ರವಾಗಬೇಕಾ...?

- ಅಶ್ವತ್ಥ ಹೆಗಡೆ

ಸುತ್ತಲೂ ದಟ್ಟ ಕಾನನ, ಹಚ್ಚಹಸುರಿನ ವನರಾಶಿ, ಮುಗಿಲೆತ್ತರಕ್ಕೆ ಬೆಳೆದ ಮರಗಳು, ಸ್ವಚ್ಛಂದವಾಗಿ ವಿಹರಿಸುತ್ತಿರುವ ಕಾಡುಪ್ರಾಣಿಗಳು, ಇವೆಲ್ಲದರ ಮಧ್ಯೆ ನಿಮಗೆ ಕೇಳುತ್ತದೆ ಜುಳುಜುಳು ನಿನಾದ. ಹೌದು ಅದೇ ನೀವು ಅಷ್ಟು ದೂರದಿಂದ ನೋಡಲೆಂದು ಬಂದ ..... ಜಲಪಾತ.

ಯಾವುದೇ ಪತ್ರಿಕೆ ಅಥವಾ ಟಿವಿಯಲ್ಲಿ ಜಲಪಾತವೊಂದರ ಪರಿಚಯ ಹೀಗೆ ಆರಂಭವಾಗುತ್ತದೆ. ಮುಂದುವರಿಯುವ ಪತ್ರಿಕಾ ನುಡಿಚಿತ್ರ (ಟಿವಿಗಳಿಗೂ ಇದು ಅನ್ವಯಿಸುತ್ತಿವೆ)ಆ ಜಲಪಾತ ಎಲ್ಲಿದೆ? ಹೇಗೆ ಹೋಗಬೇಕು? ಅಲ್ಲಿ ನೋಡುವುದಕ್ಕೆ ಏನೆಲ್ಲಾ ಇದೆ? ಎಂಬುದರ ಕುರಿತು ಮಾಹಿತಿ ನೀಡುತ್ತಾ ಹೋಗುತ್ತದೆ. ಇಲ್ಲಿಯವರೆಗೂ ಓಕೆ. ಆದರೆ ಮುಂದೆ ಆರಂಭವಾಗುತ್ತದೆ ನೋಡಿ...
ಆದರೆ ಈ ಸ್ಥಳ ಇಷ್ಟೊಂದು ಸುಂದರವಾಗಿದ್ದರೂ ಇಲ್ಲಿ ಮೂಲಭೂತ ಸೌಕರ್ಯ ಎಂಬುದು ಮರೀಚಿಕೆ. ಜಲಪಾತದವರೆಗೆ ಹೋಗಲು ಸರಿಯಾದ ರಸ್ತೆಗಳಿಲ್ಲ, ಅಂತೂ ಕಷ್ಟಪಟ್ಟು ಹೋದಿರಿ ಅಂದ್ರೂ ಅಲ್ಲಿ ನಿಂತುಕೊಳ್ಳುವುದಕ್ಕೂ ಸರಿಯಾದ ಸ್ಥಳ ಇಲ್ಲ, ತಿಂಡಿ ತೀರ್ಥಗಳಿಗೆ ಅಂಗಡಿ ಇಲ್ಲ, ವಸತಿ ಗೃಹಗಳಿಲ್ಲ ಇಲ್ಲಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಇನ್ನು ಟಿವಿಯಲ್ಲಾದರೆ ಇಲ್ಲಿನ ಪ್ರವಾಸಿಗರು ತಮ್ಮ ಕಷ್ಟವನ್ನು ಹೇಗೆ ತೋಡಿಕೊಳ್ಳುತ್ತಾರೆ ನೀವೇ ನೋಡಿ' ಅಂತಾ ಮೈಕ್ ಹಿಡಿದು ಒಂದು ಬೈಟ್ ತೋರಿಸಿಬಿಡುತ್ತಾರೆ.
ಹೀಗೆ ಓದಿದಾಗ ನನ್ನಲ್ಲಿ ಮೂಡುವ ಪ್ರಶ್ನೆ ಏನಂದ್ರೆ ಅಂತಹ ಪ್ರಕೃತಿಯ ಮಡಿಲಲ್ಲಿರುವ ಪ್ರೇಕ್ಷಣೀಯ ಸ್ಥಳಗಳಿಗೆ ಅಷ್ಟೊಂದು ವ್ಯವಸ್ಥೆ ಕಲ್ಪಿಸುವ ಅಗತ್ಯ ಇದೆಯಾ ? ಒಂದೊಮ್ಮೆ ವ್ಯವಸ್ಥೆ ಕಲ್ಪಿಸಿದ್ರು ಅಂತಿಟ್ಟುಕೊಳ್ಳೋಣ ಆಗ ಅವು ತಮ್ಮ ಮೂಲ ಸ್ವರೂಪ ಉಳಿಸಿಕೊಳ್ಳುತ್ತವೆಯಾ? ಚಾರಣ, ಟ್ರೆಕ್ಕಿಂಗ್ ಅನ್ನೊದಕ್ಕೆ ಅರ್ಥ ಎಲ್ಲಿ ಉಳಿಯುತ್ತೆ.?

ಉದಾಹರಣೆಗೆ ಉತ್ತರ ಕನ್ನಡದ ಮಟ್ಟಿಗೆ ಹೇಳುವುದಾದರೆ ಇಲ್ಲಿರುವ ಜಲಪಾತಗಳು ಒಂದಕ್ಕೊಂದು ಪೈಪೋಟಿ ನೀಡುವಷ್ಟು ಸುಂದರವಾದವು. ಇಲ್ಲಿಗೆ ಹೋದರೆ ಒಂದು ಸಲ ಮೈಂಡ್ ರೀಫ್ರೆಶ್ ಆಗೋದರಲ್ಲಿ ಸಂಶಯವೇ ಇಲ್ಲ. ಕಾಲುದಾರಿಯಲ್ಲಿ ಎದ್ದು ಬೀಳುತ್ತಾ, ಕಾಡಿನಲ್ಲೇ ಸಿಗುವ ಹಣ್ಣುಗಳನ್ನ ತಿನ್ನುತ್ತ ಹೋಗುವ ಆನಂದ ಅನುಭವಿಸಿದವರಿಗೊಂದೇ ಗೊತ್ತು. ಅದು ಇದ್ದಂತೆ ಬಿಟ್ಟರೇ ಚೆನ್ನ. ಸೊಕ್ಕಿದ್ದವನು ಖಂಡಿತಾ ಯಾಣ ನೋಡಿ ಬರ್ತಾನೆ. ಧೈರ್ಯ ಇದ್ದವನು ಬುರುಡೆ ಫಾಲ್ಸ್ ಅಥವಾ ವಾಟೆಹೊಳೆ ಫಾಲ್ಸ್ ಗೆ ಇಳೀತಾನೆ.

ಅದನ್ನು ಬಿಟ್ಟು ಎಲ್ಲಾ ಜಲಪಾತಗಳು, ಸ್ಥಳಗಳಿಗೆ ಆಧುನಿಕ ಸೌಲಭ್ಯ ಕಲ್ಪಿಸಿದರು ಅಂತಿಟ್ಟುಕೊಳ್ಳೋಣ, ಆಗ ಅಲ್ಲಿಯ ಸ್ಥಿತಿ ಏನಾಗುತ್ತೆ ಸ್ವಲ್ಪ ಯೋಚಿಸಿ. ಮಾನವನ ದಾಂಗುಡಿಯಿಂದ ಹೆದರಿ ಕಾಡು ಪ್ರಾಣಿಗಳು ಪೇರಿ ಕೀಳುತ್ವೆ. ಕೆಲವು ಸಂತತಿಯೂ ನಶಿಸಬಹುದು. ಇನ್ನು ಹೊಟೇಲ್, ಗೆಸ್ಟ್ ಹೌಸ್ ಗಳನ್ನಂತೂ ಮಾಡಿದ್ರೆ ಕೇಳೋದೇ ಬೇಡ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಮಯ, ಕೊಳಚೆಯ ಸಾಮ್ರಾಜ್ಯ. ಜಲಪಾತದ ನೀರಿಗೂ, ಕೆಂಗೇರಿ ತೀರ್ಥಕ್ಕೂ ವ್ಯತ್ಯಾಸವೇ ಇಲ್ಲದಂತೆ ಮಾಡಿದರೂ ಆಶ್ಚರ್ಯ ಇಲ್ಲ. ಅಭಿವೃದ್ಧಿ ಮಾಡಿದೀವಿ ಅಂತಾ ಹಣ ಕೀಳೋದಕ್ಕೂ ಸರ್ಕಾರಗಳು ಮುಂದಾಗ್ತವೆ. ಅಭಿವೃದ್ಧಿ ಹೆಸರಲ್ಲಿ ನೈಜ ಸೌಂದರ್ಯವನ್ನೇ ಕಳೆದುಕೊಂಡು ಸೊರಗುತ್ತಿರುವ ಅದೆಷ್ಟೋ ಪ್ರವಾಸಿ ಸ್ಥಳಗಳ ಉದಾಹರಣೆ ನಮ್ಮ ಕಣ್ಮುಂದಿವೆ.

ಇಷ್ಟಕ್ಕೂ ನಮ್ಮ ಮಾಧ್ಯಮಗಳು ಈ ವಿಷಯದಲ್ಲಿ ತುಂಬಾ ಎಡವುತ್ತಿವೆ ಅನ್ನಿಸ್ತಿದೆಯಾ.? ಜನರಿಗೆ ಸಹಾಯ ಮಾಡುತ್ತೇವೆ ಅಂತಾ ಹೇಳ್ತಾ ಅವರಿಗೆ ಗೊತ್ತಿಲ್ಲದಂತೆ ಪರಿಸರವನ್ನು ಹಾಳುಮಾಡುತ್ತಿವೆಯಾ.? ಅಭಿವೃದ್ಧಿ ಪತ್ರಿಕೋದ್ಯಮ ಅನ್ನೋದನ್ನ ತಪ್ಪಾಗಿ ಗೃಹಿಸಿದ್ದರಿಂದಲೇ ಇಷ್ಟೆಲ್ಲಾ ಆಗುತ್ತಿವೆಯಾ.? ಜನರೂ ಕೂಡ ಸೋಮಾರಿಗಳಾಗ್ತಾ, ಹುರುಪು ಕಳೆದುಕೊಳ್ತಾ, ಇಂತಹ ಸೌಲಭ್ಯಗಳೆಲ್ಲಾ ಬೇಕು ಅಂತಾ ಅಪೇಕ್ಷೆ ಪಡ್ತಿದ್ದಾರಾ.? ದಯವಿಟ್ಟು ಗೊತ್ತಾದವರು ಹೇಳಿ...

ಕೊನೆಹನಿ ಎಲ್ಲರೂ ಹಿಮಾಲಯದೆತ್ತರದಲ್ಲಿ ನಿಂತು ಸುಂದರ ದೃಶ್ಯವನ್ನು ನೋಡ್ಬೇಕು ಅಂತಾ ಹಿಮಾಲಯಕ್ಕೆ ಮೆಟ್ಟಿಲು ಅಥವಾ ಟ್ರ್ಯಾಲಿ ವ್ಯವಸ್ಥೆ ಮಾಡೋದಕ್ಕೆ ಸಾಧ್ಯಾನಾ ?