Monday, June 25, 2012

ಅವರ ಹತ್ರಾ ಆಗಿದ್ದು ನಮ್ಮ ಹತ್ರಾ ಯಾಕೆ ಆಗಲ್ಲ..?


- ಅಶ್ವತ್ಥ ಕೋಡಗದ್ದೆ
ಗೆಳೆಯ ನವೀನ ಭಟ್ ಬಹಳ ದಿನದ ನಂತ್ರ ಮಾತಿಗೆ ಸಿಕ್ಕಿದ್ದ. ಈಗಿನ ಜಮಾನದಲ್ಲಿ ಮಾತು ಅಂದ್ರೇನು.. ಎದ್ರಿಗೆ ಸಿಕ್ಕೇ ಮಾತಾಡ್ಬೇಕು, ಮೊಬೈಲ್ ನಲ್ಲೇ ಹರಟಬೇಕು ಅಂತಿದ್ಯಾ.. ಫೇಸ್ಬುಕ್ ಇದ್ಯಲ್ಲಾ.. ಅದರಲ್ಲಿ ಸುಮ್ನೆ ಚಾಟಿಂಗ್ ಮಾಡ್ತಾ ಇದ್ವಿ. ನವೀನ್ ನನಗೆ 2ನೇ ಕ್ಲಾಸ್ ನಿಂದ ಪರಿಚಯ. ಅವ್ನು ಓದಿದ್ದು ಸೈನ್ಸ್ ಆದ್ರೂ ನನ್ನ ಪ್ರೀತಿಯ ಪತ್ರಿಕೋದ್ಯಮದ ಮೇಲೆ ಆವನಿಗೆ ಅದೇನೋ ಆಸಕ್ತಿ. ಇಂಟರ್ನೆಟ್ ನಲ್ಲಿ ಸಿಗೋ ಅದೆನೇನೋ ಲೇಖನಗಳ ಲಿಂಕ್ ಗಳನ್ನ ಆಗಾಗ ಕಳಿಸ್ತಿರ್ತಾನೆ. ನನಗೆ ಕ್ಲಾಸಿಕಲ್ ಮ್ಯೂಸಿಕ್ ಇಷ್ಟಾ ಅಂತಾ ಗೊತ್ತಾದಾಗಿಂದ ಅದೆಷ್ಟು ಮ್ಯೂಸಿಕ್ ಕೇಳ್ಸಿದಾನೋ ಲೆಕ್ಕಿಲ್ಲ. ಧಾರವಾಡದ ಕೆಯುಡಿ ನಲ್ಲಿ ಲೆಕ್ಚರರ್ ಆಗಿದ್ರೂ ಬೇಡ್ತಿ ಕಣಿವೆ ಸುತ್ತೋದರಿಂದ ಹಿಡಿದು ಅವನ ಹವ್ಯಾಸಗಳೇ ಬೇರೆ.


ಇವತ್ತೂ  ಅಷ್ಟೇ, ಸುಮ್ನೆ ಒಂದು ಲಿಂಕ್ ಕಳಿಸಿ ಟೈಮ್ ಇದ್ದಾಗ ಕೇಳು ಅಂದಾ. ನಾರಾಯಣ ರೆಡ್ಡಿ ಅನ್ನೋ ಒಬ್ಬ ಕೃಷಿಕ ಸಮಾರಂಭವೊಂದರಲ್ಲಿ ಆಡಿದ ಮಾತುಗಳವು. ಸುಮಾರು 25 ನಿಮಿಷಗಳ ಅವರ ಮಾತು ಕೇಳ್ತಾ ಕೇಳ್ತಾ ಮುಗಿದಿದ್ದೇ ಗೊತ್ತಾಗ್ಲಿಲ್ಲ. ಮುಗಿದ ಮೇಲೆ ನನಗೆ ನಿಜವಾಗ್ಲೂ ಮೂಡಿದ್ ಪ್ರಶ್ನೆನೇ  ಅವರತ್ರಾ ಆಗಿದ್ದು ನಮ್ಮತ್ರೆ ಯಾಕೆ ಆಗಲ್ಲ..?  ಅನ್ನೋದು. ಹೌದು ನಾರಾಯಣ ರೆಡ್ಡಿ ಹೇಳೋ ಪ್ರತಿಯೊಂದು ಮಾತುಗಳು ಅಕ್ಷರಶಃ ನಿಜ ಇದ್ವು. ನಮ್ಮಂತ ರೈತ ಕುಟುಂಬದವರೆಲ್ಲಾ ಒಮ್ಮೆ ಕೇಳಲೇ ಬೇಕಾದ ಮಾತುಗಳಿವು.


ಮೂಲ ಆಂಧ್ರದವರಾದ್ರೂ ದೊಡ್ಡಬಳ್ಳಾಪುರದಲ್ಲಿ ಕೃಷಿ ತಪಸ್ಸು ಮಾಡಿದವ್ರು ನಾರಾಯಣ ರೆಡ್ಡಿ. ಮೊದಲು ರಾಸಾಯನಿಕ ಕೃಷಿ ಮಾಡಿ ಒಳ್ಳೇ ಬೆಳೆ ಬಂದ್ರು ನಂತ್ರ ಕೈ ಸುಟ್ಕೊಂಡ್ರು. ಆಗ ಶುರು ಮಾಡಿದ್ದು  ಸಾವಯವ ಕೃಷಿಯನ್ನು. ಇವತ್ತು ಅವರ ಬಳಿ ಇರೋ 10 ಎಕರೆ ಜಮೀನು ಅನ್ನೋದು ಕೃಷಿ ವಿಶ್ವವಿದ್ಯಾಲಯದಂತಿದೆಯಂತೆ. ಕೃಷಿಯಲ್ಲಿ ಅವರು ಮಡದ ಪ್ರಯೋಗಗಳಿಲ್ಲ. ಈಗ ಅವರಿಗೆ ಸುಮಾರು 70 ವರ್ಷ ಇರಬಹುದೇನೋ. ( ಅವರ ಪೂರ್ತಿ ವಿವರ ಸಿಗ್ತಾ ಇಲ್ಲ. ಸಿಕ್ಕವರು ದಯವಿಟ್ಟು ತಿಳಿಸಿ ) ಆದ್ರೆ ಕೃಷಿಯಲ್ಲಿ ಅವರ ವಿಶ್ವಾಸ ಮತ್ತು ಏನಾದ್ರೂ ಹೆದರಲ್ಲ ಅನ್ನೋ ಧೈರ್ಯ ಇದೆಯಲ್ಲ ಯರಾದ್ರೂ ಮೆಚ್ಚಲೇಬೇಕು.
ಅವರ ಮಾತುಗಳ ಬಗ್ಗೆ ನಾನು ಹೆಚ್ಚು ಹೇಳಲ್ಲ. ಅವರು ಮಾತನಾಡಿದ್ದನ್ನು ಒಮ್ಮೆ ಕೇಳಿ. ನಂತ್ರ ನೀವೇ ಮಾತಾಡ್ತೀರಾ.
ಇಲ್ಲಿದೆ ನೋಡಿ ಲಿಂಕ್-

Tuesday, June 19, 2012

ಮನಸ್ಸು ಭಾರವಾದಾಗ ಮತ್ತೆ ಮೂಡಿತು ಅಕ್ಷರ

 -   ಅಶ್ವತ್ಥ ಕೋಡಗದ್ದೆ
ಒಂದು ಚಿಕ್ಕ ಆಲಸಿತನ ಒಂದು ವರ್ಷ ಸುಮ್ಮನೆ ಕುಳ್ಳಿರಿಸಿತು ಅಂದ್ರೆ ನನಗೇ ನಂಬೋದಕ್ಕೇ ಆಗ್ತಿಲ್ಲ. ಬರವಣಿಗೆಯೇ ಉದ್ಯೋಗ, ಅನ್ನ, ಜೀವನ ಎಲ್ಲಾ ಅಂದುಕೊಂಡವನು. ಆದರೆ ಅದನ್ನೇ ದೂರ ಮಾಡಿಕೊಂಡಿದ್ದೇ ಅಂದ್ರೆ ಅದಿನ್ನೆಷ್ಟು ಆಲಸಿಯಾಗಿದ್ದೆ ಅಂತಾ ಇವತ್ತು ಯೋಚನೆ ಮಾಡ್ತಾ ಇದ್ದೆ. ಒಂದು ವರ್ಷದಲ್ಲಿ ಏನೆಲ್ಲಾ ಆಗಿಹೋಯ್ತು, ಯಡಿಯೂರಪ್ಪ ಖುರ್ಚಿ ಕಳಕೊಂಡ್ರು, ಸದಾನಂದ ಗೌಡ್ರು ನಗುನಗುತಾ ಬಂದು ಕುಳಿತುಕೊಂಡ್ರು, ಆಚಾರ್ಯ ರಾಜಕೀಯ ಅಷ್ಟೇ ಅಲ್ಲ, ಜೀವನವೇ ಸಾಕಪ್ಪ ಅಂತಾ ಹೋಗ್ಬಿಟ್ರು.... ಬಳ್ಳಾರಿ ಸಾಮ್ರಾಜ್ಯ ನೆಲಸಮ ಆಯ್ತು, ರೆಡ್ಡಿ ಜೈಲಿಗೆ ಹೋದ್ರು. ಅಯ್ಯೋ ಮತ್ತೆ ಇಲ್ಲೂ ರಾಜಕೀಯನೇ ಆಗ್ಬಿಡ್ತು.

ಇನ್ನು ನನ್ನ ಬಗ್ಗೆ ಹೇಳ್ಬೇಕು ಅಂದ್ರೆ ಬೆಂಗಳೂರಿಗೆ ಬೈ ಬೈ ಹೇಳಿ ದಾವಣಗೆರೆಗೆ ಹೋಗೋದು ಬಹುತೇಕ ಖಚಿತವಾಯ್ತು. ಕೊನೆ ಹಂತದಲ್ಲಿ ಅದು ಕೈತಪ್ಪಿ ಇಲ್ಲೇ ಉಳ್ಕೊಂಡೆ. ನನ್ನ ಹಳೆಯ ಆಫೀಸ್ ನಲ್ಲಿ ಅದೇನೇನೋ ಬದಲಾವಣೆಗಳಾದ್ವು, ಸಾಕಪ್ಪಾ ಅಂತಾ ಕೈಕುಡುಗಿ ಎದ್ದುಬಿಟ್ಟೆ. ಹೊಸ ಆಫೀಸ್ ಗೆ ಬಂದೆ. ಹಾಗೂ, ಹೀಗೂ ಅಡ್ಜೆಸ್ಟ್ ಆಗಿಬಿಟ್ಟೆ.. 

ಅಷ್ಟರಲ್ಲೇ ಅಪ್ಪಯ್ಯ ಆರಾಮಿಲ್ಲದೇ ಮಲಗಿದ್ರು, ಮೊದಲಿನ ಹಾಗೇ  ಓಡಾಡೋಕೆ ಒಂದು ತಿಂಗಳೇ ಬೇಕಾಯ್ತು. ನಡುವೆನೇ ಕಳೆದ ವರ್ಷದಲ್ಲಿ ಒಂದಷ್ಟು ಖುಷಿ ಜೊತೆ ಕೆಲ ಬೇಜಾರಗಳೂ ಹೆಗಲೇರಿ ಕುಂತ್ವು. ಹೈಸ್ಕೂಲ್ ನಿಂದ ಡಿಗ್ರಿ ತನಕ ಜೊತೆಗೆ ಓದಿದ್ದ ನಾಗೇಂದ್ರ ಆಕ್ಸಿಡೆಂಟ್ ನಲ್ಲಿ ತೀರ್ಕೊಂಡು ಬಿಟ್ಟ. ಒಬ್ಬರ ಹತ್ರಾನೂ  ದೊಡ್ಡಕ್ಕೆ ಮಾತನಾಡದ, ಯಾರಿಗೂ ಕೆಟ್ಟದ್ದು ಮಾಡದ ಅವ್ನು ಇಷ್ಟು ಬೇಗ ಹೋಗ್ಬಿಟ್ನಾ ಅಂತಾ ಆಶ್ಚರ್ಯ ಆಗ್ತಿದೆ. ಜವರಾಯನೇನು ಒಳ್ಳೆಯವರು, ಕೆಟ್ಟವರು ಅಂತಾ ಬೇರೆ ಮಾಡಿ ನೋಡ್ತಾನಾ..

ಒಂದು ವರ್ಷದಲ್ಲಿ ಏನೇನೋ ನಡೆದುಹೋಯ್ತು... ಬರಿತಾ ಕುತ್ಗೊಂಡಿದ್ರೆ ಏನೆಲ್ಲಾ ಬರೀಬಹುದಿತ್ತು. ಆದ್ರೆ ಸುಮ್ನೆ ಕುತ್ಗೊಂಡು ಬಿಟ್ಟೆ. ಬರೀ ಮೊಬೈಲ್, ಫೆಸ್ಬುಕ್, ಕ್ರಿಕೆಟ್, ಸಿನಿಮಾ, ಸುತ್ತಾಟ ಅಂತಾ ಕಾಲ ಕಳೆದೆ. ನಮ್ಮ ಹಳ್ಳಿಹುಡುಗ್ರು ಬ್ಲಾಗ್ ಪ್ರತಿ ದಿನ ಅಣಕಿಸ್ತಿತು. ಕಳೆದ ವರ್ಷ ಜೂನ್ 7 ಕ್ಕೆ ಬರೆದ ಲೇಖನವೇ ಲಾಸ್ಟ್. ಕಡೆಗೆ ಒಂದಕ್ಷರ ಬರೆದಿರಲಿಲ್ಲ. ಬ್ಲಾಗ್ ಅಪ್ಡೇಟ್ ಮಾಡ್ರೋ ಅಂತಾ 'ನನ್ನೊಳಗಿನ ಕನಸು ವೆಂಕಟೇಶ್ ಹೇಳಿದ್ದ. ಹುಂ ಅಂತಾ ಹೇಳಿ ಸುಮ್ನಾಗಿಬಿಟ್ಟಿದ್ದೆ.

ಮನಸ್ಸಲ್ಲಿ ಬೇಸರ, ನೋವೆಂಬುದು ಕಲ್ಲಾದಾಗ ಅಕ್ಷರ ಕಡೆಯೋದು ನನ್ನ ಜಾಯಮಾನ. ಅದು ಮತ್ತೊಮ್ಮೆ ಹೌದು ಅಂತಾ ಸಾಭೀತಾಗಿದೆ. ಎದೆಯಲ್ಲಿ ನೋವೆಂಬ ಹುತ್ತ ಕಟ್ಟಿ ಬೆಳೀತಿದೆ. ಅಕ್ಷರವೂ ಒಡಮೂಡ್ತಿದೆ. ಮತ್ತೆ ಬರೆಯೋದಕ್ಕೆ ಕೂತಿದ್ದೇನೆ. ಈ ವಿಷಯದಲ್ಲಿ ಅವಳಿಗೆ ನಾನು ಥ್ಯಾಂಕ್ಸ್ ಹೇಳ್ಲಾ.. ಥ್ಯಾಕ್ಸ್ ಹೇಳಿದ್ರೂ ಅವಳು ಅದನ್ನು ಸ್ವೀಕರಿಸಲ್ವಲ್ಲಾ.....