- ಅಶ್ವತ್ಥ ಕೋಡಗದ್ದೆ
ಹೊರನಾಡಿನಿಂದ ಹೊರಡೋದೇ ಮಧ್ಯಾಹ್ನ 2-30 ಆಗ್ಬಿಟ್ಟಿತ್ತು. ಬೆಂಗಳೂರಿಗೆ ಹೋಗೋ ಹಾದಿ ಕೇಳಿದ್ರೆ ಒಬ್ಬೊಬ್ಬರು ಒಂದೊಂದು ರೀತಿ ಹೇಳೋರು. ಹ್ಯಾಗೆ ಹೋಗೋದು ಅಂತಾ ಯೋಚ್ನೆ ಮಾಡಿದಷ್ಟೂ ಸಮಸ್ಯೆ ಕುತ್ತಿಗೆಯಿಂದ ತಲೆಗೇರ್ತಿತ್ತೇ ವಿನಃ ಬಗೆಹರಿಯೋ ಲಕ್ಷಣ ಕಾಣ್ತಿರ್ಲಿಲ್ಲ. ಹಾಗೂ ಹೀಗೂ ಅಲ್ಲೇ ಇದ್ದ ಯಾವುದೋ ಟ್ರಾವೆಲ್ಸ್ ನವರ ಹತ್ರ ಕೇಳ್ಕೊಂಡು ಕಳಸಾ, ಕೊಟ್ಟಿಗೆಹಾರ, ಮೂಡಿಗೆರೆ, ಬೇಲೂರು ಮಾರ್ಗವಾಗಿ ಹೋಗೋದು ಅಂತಾ ಡಿಸೈಡ್ ಮಾಡಿದ್ವಿ. ಆಗ ನನಗೆ ಖುಷಿಯಾದದ್ದು ರಸ್ತೆ ಚೆನ್ನಾಗಿದೆ ಅಂತಲ್ಲಾ, ಮೂಡಿಗೆರೆ ಮೂಲಕ ಹೋಗ್ಬಹುದಲ್ಲ ಅನ್ನೋದು. ತಕ್ಷಣ ನೆನಪಾದದ್ದು ಮೂಡಿಗೆರೆಯ ಮಾಯಾವಿ ಮತ್ತು ಕೃಷ್ಣೇಗೌಡನ ಆನೆ.
ಹಾಗಂತ ತೇಜಸ್ವಿಯವರನ್ನಾ ಪೂರ್ತಿ ಓದ್ಬಿಟ್ಟಿದ್ದೆ, ಅವರ ಪುಸ್ತಕದಲ್ಲಿ ಬರೋ ಎಲ್ಲಾ ಪಾತ್ರ, ಸ್ಥಳಗಳು ಬಾಯಿಪಾಠವಾಗ್ಬಿಟ್ಟಿತ್ತು ಅಂತಲ್ಲ. ನಾನು 4 ವರ್ಷದ ಹಿಂದೆ ಅವರ ಅಣ್ಣನ ನೆನಪು ಓದಿ ಒಬ್ಬನೇ ಬಿದ್ದು ಬಿದ್ದು ನಕ್ಕದ್ದುಂಟು. ಪರಿಸರದ ಕಥೆ, ಅಬಚೂರಿನ ಪೋಸ್ಟಾಫೀಸು, ಮಾಯಾಲೋಕ, ಕಿರುಗೂರಿನ ಗೈಯ್ಯಾಳಿಗಳು ಹೀಗೆ ನಾಲ್ಕಾರು ಪುಸ್ತಕಗಳನ್ನು ಓದಿ ಖುಷಿಪಟ್ಟವನು ನಾನು. ಅದರಲ್ಲಿ ಬರುವ, ಆ ಕಾಡು, ಅಲ್ಲಿಯ ಶಿಕಾರಿ, ಬಾಲದಂತೆ ಹಿಂಬಾಲಿಸುವ ಕಿವಿ ನಾಯಿ, ಸ್ಕೂಟರ್, ಮೂಡಿಗೆರೆ ಹ್ಯಾಂಡ್ ಪೋಸ್ಟ್, ಅಲ್ಲಿಯ ಚಿಕನ್ ಸ್ಟಾಲ್, ಪೆಟ್ಟಿಗೆ ಅಂಗಡಿ, ವಿದ್ಯುತ್-ಟೆಲಿಪೋನ್-ಅರಣ್ಯ ಇಲಾಖೆ ನಡುವಿನ ಜಗಳ ಹೀಗೆ ಅದೆಷ್ಟೋ ಪಾತ್ರಗಳನ್ನು ಕಲ್ಪಿಸಿಕೊಂಡು ವಿಸ್ಮಿತನಾಗಿದ್ದೆ.
ಮೂಡಿಗೆರೆ ಮೇಲೆ ಹೋದ್ರೆ ಇವಿಷ್ಟರಲ್ಲಿ ಎಷ್ಟು ನೋಡಲು ಸಿಗಬಹುದು ಅಂತಾ ಲೆಕ್ಕಾ ಹಾಕ್ತಿದ್ದೆ. ಕಾರು ಕೊಟ್ಟಿಗೆಹಾರ ದಾಟಿ ಒಂದೊಂದೇ ತಿರುವುಗಳನ್ನು ಹಿಂದಕ್ಕೆ ಹಾಕ್ತಾ ಸಾಗ್ತಾ ಇತ್ತು. ನನಗೆ ರಸ್ತೆ ಬದಿಯ ಕಿಲೋಮೀಟರ್ ಕಲ್ಲನ್ನು ನೋಡೋದೊಂದೇ ಕೆಲಸ, ಮೂಡಿಗೆರೆ ಇನ್ನೆಷ್ಟು ಕಿಲೋಮೀಟರ್ ಇದೆ ಅಂತಾ... ಚಿಕ್ಕ ಘಟ್ಟವನ್ನು ಹತ್ತಿ ನಾಲ್ಕು ರಸ್ತೆ ಕೂಡುವ ಸ್ಥಕ್ಕೆ ಬಂದು ನಿಂತಿತ್ತು ಕಾರು. ಪಕ್ಕದಲ್ಲೇ ಇದ್ದ ನವೀನನ ಹತ್ರ ಹ್ಯಾಂಡ್ ಪೋಸ್ಟ್ ಇಲ್ಲಿ ಎಲ್ಲಿ ಬರೋತ್ತೆನೋ ಅಲ್ವಾ ಅಂತಾ ಕೇಳಿದ್ದೂ ಆಯ್ತು. ಅವನು ಆಕಡೆ ಈಕಡೆ ಕಣ್ಣು ಹಾಯಿಸಿದವನು ಯೇ ಇದೇ ಹ್ಯಾಂಡ್ ಪೋಸ್ಟ್ ಮಾರಾಯಾ... ಅಲ್ಲಿ ನೋಡು ಬೋರ್ಡ್ ಇದೆ ಅಂತಾ ಕೂಗಿಕೊಂಡ. ನನಗೆ ಒಮ್ಮೆಲೆ ವಿಚಿತ್ರ ಅನುಭವ.
ನಾನಿರೋದು ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ. ತೇಜಸ್ವಿ ಪುಸ್ತಕದಲ್ಲಿ ಓದಿದ್ದ ಸ್ಥಳದಲ್ಲೇ ಅನ್ನೋ ಫೀಲಿಂಗ್. ಶಿವೇಗೌಡರ ಸಾಮಿಲ್ ಎಲ್ಲಿರಬಹುದು? ಜಬ್ಬಾರನ ಲೂನಾ ಇದೇ ಆಗಿರ್ಬಹುದಾ? ರಹಮಾನ್ ಸಾಬಿಯ ಪೆಟ್ಟಿಗೆ ಅದಾಗಿರಲಿಕ್ಕೆ ಸಾಧ್ಯ ಇಲ್ಲಾ, ಕೆಇಬಿ ಕಚೇರಿ ಕಾಣಿಸ್ತಾನೇ ಇಲ್ವಲ್ಲ, ಅಂತಾ ಹೇಳ್ತಿರ್ಬೇಕಾದ್ರೆ ಕಣ್ಣಿಗೆ ಬಿದ್ದಿದ್ದು ‘ದೂರವಾಣಿ ವಿನಿಮಯ ಕೇಂದ್ರ ಮೂಡಿಗೆರೆ’ ಎಂಬ ಬೋರ್ಡ್. ನಮಗಂತೂ ಹಾಲು ಕುಡಿದಷ್ಟು ಸಂತೋಷ. ಆಟ್ ಲೀಸ್ಟ್ ಪುಸ್ತಕದಲ್ಲಿನ ಒಂದಾದ್ರೂ ಸ್ಥಳ ಕಾಣಿಸಿತಲ್ಲಾ ಅಂತಾ.
ನನಗೆ ಮೊದಲಿನಿಂದಲೂ ಅಷ್ಟೇ. ಕೆಲವು ಪುಸ್ತಕಗಳಲ್ಲಿ ಬರೋ ಸ್ಥಳಗಳು ವಿಪರೀತ ಅನ್ನುವಷ್ಟು ತಲೆ ಕೊರಿತಿರ್ತಾವೆ. ಅದು ಹೇಗಿರಬಹುದು? ಅಲ್ಲಿ ನಾವಿದ್ರೆ ಆ ಲೇಖಕರ ಗುರುತು ಇರ್ತಿತ್ತಲ್ವಾ ಅಂತಾ ಅನ್ನಿಸ್ತಿರುತ್ತೆ. ಭರತನಹಳ್ಳಿ ಮಾರ್ಗವಾಗಿ ಹೋಗೋವಾಗಲೆಲ್ಲಾ ರವಿ ಬೆಳಗೆರೆ ನೆನಪಾಗ್ತಿದ್ರು. ಅವರು ಖಾಸ್ ಬಾತ್ ನಲ್ಲಿ ಆ ಊರಿನ ನೆನಪು ಮಾಡ್ಕೊಳ್ಳೋ ಕಾರಣದಿಂದ. ಗೋಳಿ ಶಾಲೆ ಅಂದಕೂಡ್ಲೆ ನೆನಪಾಗೋದು ವಿಶ್ವೇಶ್ವರ ಭಟ್ರು. ಹೀಗೆ ಅದೆಷ್ಟೋ... ನನಗೆ ಅವರೆಲ್ಲ ವ್ಯಕ್ತಿಗತ ಪರಿಚಯ ಇಲ್ದೆನೇ ಇರಬಹುದು. ಆದ್ರೆ ಅವರ ಬರಹಗಳಿಂದ ಆ ಊರು ನಮಗೆ ಲೇಖಕನನ್ನು ನೆನಪು ಮಾಡಿಸಿಕೊಡ್ತಾವೆ ಅಲ್ವಾ?
ತೇಜಸ್ವಿ ಏನಾದ್ರೂ ಈಗ ಇದ್ದಿದ್ರೆ ಸ್ಕೂಟರ್ ಹತ್ತಿಕೊಂಡು ಮೊನ್ನೆ ಮೂಡಿಗೆರೆಯಲ್ಲಿ ಓಡಾಡ್ತಾ ಇರ್ತಿದ್ರೆನೋ, ನಾನು ಅವರನ್ನು ನೋಡಬಹುದಿತ್ತೆನೋ ಅನ್ನೋ ಗುಂಗು ಇನ್ನು ತಲೆಯಲ್ಲಿದೆ.
good ashwath... keep up
ReplyDelete