Sunday, October 31, 2010

ಗೆಸ್ಟ್ ಕಾಲಂ      
                               
ಅಮ್ಮಾ .....ಕ್ಷಮಿಸಿ ಬಿಡೇ....... 
- ರೂಪಾ ಹೆಗಡೆ

ಧಗಧಗಿಸುವ ಬಿಸಿಲು, ಒಂದೇ ಒಂದು ನಾಯಿಯೂ ಓಡಾಡದ ಖಾಲಿ ರಸ್ತೆ... ಯೋಚಿಸುತ್ತಲೇ ನಿಂತಿದ್ದೆ. ಎಷ್ಟೋ ಬಾರಿ, ಹೀಗೆ ಅದೆಷ್ಟೋ ಬಾರಿ ಕನಸುಗಳನ್ನು ನೇಯ್ದಿದ್ದೇನೆ. ನೋವುಗಳನ್ನು ನುಂಗಿದ್ದೇನೆ. ಮಾಡಬಾರದ ತಪ್ಪು ಮಾಡಿ ಪರಿತಪ್ಪಿಸಿದ್ದೇನೆ. ಇನ್ನೆಂದೂ ಆ ತಪ್ಪು ಮಾಡಬಾರದು ಎಂದು ಶಪಥ ಮಾಡಿದ್ದೇನೆ. ನೋವಿಗೆ ಕಾರಣವನ್ನೂ ಹುಡುಕಿದ್ದೇನೆ. ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೇನೆ. ಆದರೆ ಪ್ರತಿಬಾರಿಯೂ ಮಾಡಬಾರದು ಎಂದುಕೊಂಡ ತಪ್ಪನ್ನೇ ಮರುಕಳಿಸುತ್ತೇನೆ. ಇಷ್ಟಾದರೂ ಚಿಂತೆ ಮರೆತು ಸಂತೆಯಲ್ಲಿ ನಿದ್ದೆ ಮಾಡುವಂತೆ ಬದುಕುತ್ತಿದ್ದೇನೆ. 




ಆದರೆ ಇಂದು ಮಾತ್ರ ಯಾಕೋ ಮನಸ್ಸು ಸ್ತಿಮಿತದಲ್ಲಿಲ್ಲ. ಮಾಡಿದ ತಪ್ಪನ್ನು ನನ್ನಿಂದಲೇ ಕ್ಷಮಿಸಿಕೊಳ್ಳಲಾಗುತ್ತಿಲ್ಲ. ನನ್ನ ಪ್ರೀತಿಯ ಖಾಲಿ ರಸ್ತೆ ಕೂಡ ಇಂದು ಯಾಕೋ ಇಷ್ಟವಾಗುತ್ತಿಲ್ಲ. ಎಂದೂ ಇಲ್ಲದ ರಸ್ತೆಯಲ್ಲಿ ಇಂದು ಆಗೊಂದು ಈಗೊಂದು ವಾಹನಗಳು ಬುರ್ರ್ ಎಂದು ಸದ್ದು ಮಾಡುತ್ತ ನನ್ನ ಮನಸ್ಸನ್ನು ಮತ್ತಷ್ಟು ಕಲಕುತ್ತಿವೆ. ತನ್ನೆಲ್ಲ ಜೀವನವನ್ನು ಮುಡುಪಿಟ್ಟು ಎಂದೆಂದೂ ತೀರಿಸಲಾರದಷ್ಟು ಪ್ರೀತಿ ನೀಡಿದ ಜೀವಕ್ಕೆ ನೋವು ನೀಡಿದ್ದಾಗಿದೆ. ಕೋಪಕ್ಕೆ ಮನಸ್ಸು ಕೊಟ್ಟು ತಪ್ಪು ಮಾಡಿಯಾಗಿದೆ. ತಪ್ಪನ್ನು ಕ್ಷಮಿಸಿಬಿಡು ಎನ್ನಲು ಚಡಪಡಿಸುತ್ತಿದ್ದೇನೆ. ಮನಸ್ಸು ಹೇಳಿಕೊಳ್ಳಲಾಗದ ದುಃಖದಲ್ಲಿ ತೋಯ್ದಾಡುತ್ತಿದೆ. ರಾತ್ರಿ ಪೂರ್ತಿ ನಿದ್ದೆಯಿಲ್ಲದೆ ಹಾಸಿಗೆಯಲ್ಲಿ ಒದ್ದಾಡಿದ್ದಾಯ್ತು. ಅಮ್ಮನ ಆ ಮಾತು ಮತ್ತೆ ಮತ್ತೆ ಕಿವಿಗೆ ರಾಚುತ್ತಿದೆ.  'ನಾನು ಬದುಕಿದ್ದೇ ತಪ್ಪಾ' ? ಅಮ್ಮನ ಈ ಪ್ರಶ್ನೆ ಪದೇ ಪದೇ ಜೀವ ಹಿಂಡುತ್ತಿದೆ. 

ತನ್ನೆಲ್ಲಾ ದುಃಖವನ್ನು ಮರೆತು ಮಕ್ಕಳಿಗಾಗಿ ಬದುಕಿದ ಅಮ್ಮನಿಗೆ ನಾನು ಕೊಟ್ಟ ಉಡುಗೊರೆ ಇದೇನಾ? ಎಲ್ಲಾ ಹೆಣ್ಣು ಮಕ್ಕಳಂತೆ  ಕನಸುಗಳನ್ನು ಕಣ್ತುಂಬಿಕೊಂಡು ಹೊಸ ಮನೆಗೆ ಬಂದ ಅಮ್ಮನಿಗೆ ಮೊದಲು ಎಲ್ಲವೂ ಹೊಸತು. ಬೆಟ್ಟದಷ್ಟು ಪ್ರೀತಿ ನೀಡುವ ಪತಿ, ಸೊಸೆಯನ್ನು ಮಗಳಂತೆ ಕಾಣುವ ಅತ್ತೆ, ನಾದಿನಿಯರು. ಇಷ್ಟನ್ನೇ ಬೇಡಿ ಬಂದಿದ್ದಳು. ಆಗಷ್ಟೇ ಇಪ್ಪತ್ತಕ್ಕೆ ಕಾಲಿಟ್ಟ ಅವಳು ತನ್ನ ಕನಸಿಗೆ ಸಾಥ್ ನೀಡುವ ಪತಿಯೊಂದಿಗೆ ನಾಲ್ಕು  ಹೆಜ್ಜೆ ಇಟ್ಟಿದ್ದಳಷ್ಟೆ. ಆಗಲೇ ದೇವರಿಗೆ ಅಸೂಯೆ ಆರಂಭವಾಯ್ತು. ಪತಿ, ಮಕ್ಕಳೊಂದಿಗೆ ಪುಟ್ಟ ಸಂಸಾರ ನಡೆಸಬೇಕೆಂಬ ಅಮ್ಮನ ಕನಸು ನುಚ್ಚು ನೂರಾಗಿತ್ತು. ಜೀವನದ ಸಂತೋಷದ ಕ್ಷಣಗಳು ಕೇವಲ ನೆನಪಾಗಿದ್ದವು. ನೂರು ವರ್ಷ ಬಾಳಿ ಎಂದು ಸದಾ ಕಿವಿಯಲ್ಲಿ  ಹೇಳುತ್ತಿದ್ದ ಅವಳ ಪ್ರೀತಿಯ ಪತಿರಾಯ ಈ ನರಕದಲ್ಲಿ ಅವಳನ್ನು ಬಿಟ್ಟು ಏಕಾಂಗಿಯಾಗಿ ಹೊರಟು ಹೋಗಿದ್ದ. 


ಸಂತೋಷ, ದುಃಖ, ವೇದನೆ, ಆಸೆ, ಕನಸು... ಊಹುಂ ಯಾವುದೂ ಉಳಿದಿಲ್ಲ. ಪ್ರತಿ ಕ್ಷಣ, ಪ್ರತಿ ದಿನವನ್ನು ಮಕ್ಕಳಿಗಾಗಿ ಕಳೆದಿದ್ದಾಳೆ. ಜೀವನದಲ್ಲಿ ಬಂದ ಎಲ್ಲಾ ಕಷ್ಟವನ್ನು, ಮಾತುಗಳನ್ನು ಎದುರಿಸಿ ನಿಂತಿದ್ದಾಳೆ. ಮರೆಯಲ್ಲಿ ಕಣ್ಣೀರಿಟ್ಟಿದ್ದಾಳೆ.  ಆದರೆ  ಅವಳ ನೋವು ಮಾತ್ರ ಮಕ್ಕಳಾದ ನಮಗೆ ಇನ್ನೂ ಪೂರ್ತಿಯಾಗಿ ತಿಳಿದಿಲ್ಲ. ತಿಳಿದರೂ ಅವಳ ಕಣ್ಣಿರೋರೆಸೋ ಸಾಮರ್ಥ್ಯ ನಮಗಿಲ್ಲ. ಅವಳ ಆಳೆತ್ತರಕ್ಕೆ ಬೆಳೆದ ಮಕ್ಕಳು ಇನ್ನೂ ಅಮ್ಮನ ನೋವಿಗೆ ಸ್ಪಂಧಿಸುತ್ತಿಲ್ಲ. ಹೊಸದೊಂದು ಜೀವನ ನೀಡಿದ ಮುದ್ದು ಅಮ್ಮನಿಗೆ ನಾವು ನೀಡಿದ್ದು ಬರೀ ನಿರಾಶೆ. ನೋವು. ಇದು ತಿಳಿದೂ ಪದೇ ಪದೇ ಅಮ್ಮನ ಮನಸ್ಸನ್ನು ಕಿವುಚುತ್ತಿದ್ದೇನೆ. ಅವಳು ಎಷ್ಟೋ ವರ್ಷಗಳಿಂದ ತನ್ನ ಮನಸ್ಸಿನಲ್ಲಿದ್ದ ಆಸೆಯೊಂದನ್ನ ಹೇಳಿದ್ದಳು. ಅದನ್ನ ಈಗಲೇ ಈಡೇರಿಸಲಾರೆ ಎಂಬುದನ್ನು ಸೂಕ್ಷ್ಮವಾಗಿ ಹೇಳಬಹುದಿತ್ತು. ಆದರೆ ಯಾಕೆ ದುಡುಕಿ ಮಾತನಾಡಿದೆ. ಈ ರೀತಿ ಉತ್ತರ ನೀಡೋ ಅವಶ್ಯಕತೆಯಾದರೂ ಇತ್ತಾ

ಊಹುಂ ಇನ್ನೂ ತಿಳಿದಿಲ್ಲ. ಅಮ್ಮನ ಮೇಲೆ ಅಪಾರ ಪ್ರೀತಿಯಿದೆ. ಗೌರವವಿದೆ. ಆದ್ರೆ ನನ್ನನ್ನು ಕ್ಷಮಿಸು ಎನ್ನೋ ಮಾತು ಮಾತ್ರ ಅಮ್ಮನ ಮುಂದೆ ಹೊರಡುತ್ತಿಲ್ಲ. ಕೋಪವೊಂದೆ ಅಮ್ಮನನ್ನು ಮಾತನಾಡಿಸೋ ಸೂತ್ರವಾಗಿದೆ.  ಆದರೆ ಅಮ್ಮ ಮಾತ್ರ ಪ್ರತಿ ಬಾರಿಯಂತೆ ಈ ಬಾರಿಯೂ ಮಗಳನ್ನು ಕ್ಷಮಿಸುತ್ತಾಳೆ. ಕ್ಷಮಿಸೋ ಮಾತು ಇರಲಿ ಅವಳಿಗೆ ನಾನು ಆಡಿದ್ದು ನೋವಿನ ಮಾತೇ ಅಲ್ಲ.  ಕೆಲವೇ ಕ್ಷಣಗಳಲ್ಲಿ ಅದನ್ನು ಮರೆತಿರುತ್ತಾಳೆ.
ಹೌದು, ಅಮ್ಮ ಎಲ್ಲವನ್ನೂ ಮರೆತಿದ್ದಳು. ಖಾಲಿ ರಸ್ತೆ ನೋಡುತ್ತಿದ್ದ ನನ್ನನ್ನು ಎಚ್ಚರಿಸಿ ಅಲ್ಲೇನಿದೆ ಮಗಳೆ? ಇಲ್ಲಿ ಬಾ ಚಂದಮಾಮವನ್ನು ನೋಡು ಎಂದು ಕರೆದಿದ್ದಳು.....

ಅಮ್ಮ ಅನ್ನೋ ಅಮೂಲ್ಯ ವಸ್ತು, ಭೂಮಿ ಮೇಲಿರೋ ದೇವರು. ಎಲ್ಲರಿಗೂ ಸಿಗೋದು ಕಷ್ಟ. ಎಷ್ಟೋ ಮಂದಿ ಅಮ್ಮನಿಲ್ಲದ ನೋವಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಂತಹುದರಲ್ಲಿ ನಾವು ಅದೃಷ್ಟವಂತರು. ಇದನ್ನ ತಿಳಿದು ಮುತ್ತಿನಂತ ಅಮ್ಮನನ್ನು ಪ್ರೀತಿಯಿಂದ ಅಪ್ಪಿಕೊಳ್ಳಿ. ಅಷ್ಟೇ ಸಾಕು ಹೆತ್ತಮ್ಮನ ಮನಸ್ಸಿಗೆ ನೆಮ್ಮದಿ ನೀಡಲು...

1 comment:

  1. Ya really wonderful article.. I felt guilty by reading by this one. Ya i also so many times felt these feelings.. Ya mother is nice gift given by the god. I am also did a so many quarrels with mine mother. Ya really only mother can excuse all our these type of quarrels.. and makes us to joy..

    ReplyDelete