Saturday, September 18, 2010

ಭುವಿಯ ಬಾನಬುಟ್ಟಿ – ಜೇನುಕಲ್ಲುಗುಡ್ಡ

- ಅಶ್ವತ್ಥ ಕೋಡಗದ್ದೆ
ಕಿತ್ತಳೆಯಂತ ಸೂರ್ಯ ಇನ್ನೇನು ಮನೆಗೆ ಹೋಗಲು ಅವಸರಿಸುತ್ತಿದ್ದ. ಪ್ರವಾಸಿಗರು ಈ ಸೊಬಗನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದರು. ಫೋಟೋಗ್ರಾಫರ್ ಗಳಿಗಂತೂ ಬಿಡುವೇ ಇಲ್ಲ. ತಮ್ಮ ಮೂರನೇ ಕಣ್ಣಿನಿಂದ ಈ ಸೌಂದರ್ಯವನ್ನು ಕ್ಲಿಕ್ಕಿಸುವುದರಲ್ಲಿ ಫುಲ್ ಬ್ಯುಸಿ. ವ್ಹಾ... ವ್ಹಾ... ಅನ್ನೋ ಉದ್ಗಾರ ಎಲ್ಲರ ಬಾಯಲ್ಲಿ. ಅಲ್ಲಿ ನೋಡು ಮಾರಾಯಾ, ಸಖತ್ ಆಗಿದೆ ಅಲ್ವಾ ? ಅಂತಾ ಬುಜ ತಟ್ಟುವವರಿಗೂ ಕೊರತೆ ಇಲ್ಲ. ಆದ್ರೆ ಒಂದು ನಿಮಿಷ ದೃಷ್ಟಿ ತಪ್ಪಿದ್ರೂ ಎಲ್ಲಿ ಒಳ್ಳೆ ಸೀನ್ ಮಿಸ್ಸಾಗ್ಬಿಡುತ್ತೋ ಅನ್ನೋ ಆತಂಕ. ಒಮ್ಮೆ ಜೇನುಕಲ್ಲುಗುಡ್ಡದ ಮೇಲೆ ನಿಂತು ನೋಡಿ, ನಿಮಗೂ ಈ ಅನುಭವ ಆಗ್ದಿದ್ರೆ ನಂತ್ರ ಹೇಳಿ. 


ಪ್ರಕೃತಿದತ್ತವಾದ ಜೇನುಕಲ್ಲುಗುಡ್ಡ ಮೈದಳೆದು ನಿಂತಿರೋದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ 15 ಕಿಲೋಮೀಟರ್ ದೂರದಲ್ಲಿ. ಸುತ್ತಲೂ ನಿತ್ಯಹರಿದ್ವರ್ಣದ ದಟ್ಟಕಾನನ. ನಂದಿ, ತೇಗ, ಬೀಟೆ, ಹೊನ್ನೆ, ಮತ್ತಿ, ಹುಣಾಲು, ಬನಾಟೆ, ಸಾಗವಾನಿ,... ಹೀಗೆ ಹೆಸರು ಗೊತ್ತಿರುವ, ಗೊತ್ತಿಲ್ಲದ ಅದೆಷ್ಟೋ ಮರಗಳು... ಯಾವುದೂ ಸಣ್ಣ ಗಾತ್ರದವಲ್ಲ. ಒಂದಕ್ಕೊಂದು ಪೈಪೋಟಿ ನೀಡುತ್ತ, ಉದ್ದ-ಅಗಲ ಸಮನಾಗಿ ಬೆಳೆದಂತವು. ಪಂಚತಂತ್ರದ ಕಥೆಗಳಲ್ಲಿ ವಿವರಿಸೋ ಬ್ರಹ್ಮರಾಕ್ಷಸನ ಗಾತ್ರದವು. ಇದರ ಮಧ್ಯದ ಕಾಲುಹಾದಿಯಲ್ಲಿ ಸಾಗಿ ಗುಡ್ಡದ ಶಿರ ತಲುಪಿದಾಗಿ ಕಾಣುವುದು ವಿಹಂಗಮ ನೋಟ.
ಗುಡ್ಡದ ಮೇಲಿಂದ ಕೆಳಕ್ಕೊಮ್ಮೆ ಕಣ್ಣುಹಾಯಿಸಿದರೆ ಜೀವ ಬಾಯಿಗೆ ಬರುತ್ತೆ. ಸಾವಿರಾರು ಅಡಿ ಕಂದಕ ದುತ್ತಂತ ಎದುರಿಗೆ ಬರುತ್ತೆ. ಅದರ ಮಧ್ಯೆ ಹಾವಿನಂತೆ ಹರಿಯುವ ನದಿ. ಅಲ್ಲಲ್ಲಿ ಕಲ್ಲಿನ ಪದರಿನ ನಡುವೆ ಬೆಳೆದ ಕಲ್ಬಾಳೆ ಗಿಡಗಳು. ಇನ್ನು ಈ ಸ್ಥಳಕ್ಕೆ ಈ ಹೆಸರು ಬರಲು ಕಾರಣವಾದ ಜೇನುಗೂಡುಗಳಿಗಂತೂ ಲೆಕ್ಕವಿಲ್ಲ. ಕಲ್ಲು ಬಂಡೆ ಸಿಕ್ಕಸಿಕ್ಕಲ್ಲಿ ಜೇನಿನ ಸಂಸಾರವೇ. ಹಾಗಂತ ಯಾರಿಗೂ ತೊಂದರೆ ಕೊಡೋ ಜಾಯಮಾನ ಇವುಗಳದ್ದಲ್ಲ. ಪ್ರವಾಸಿಗರನ್ನು ನೋಡಿ ನೋಡಿ ಇವಕ್ಕೂ ಅಭ್ಯಾಸವಾದಂತಿದೆ. ನೀವು ಸಂಜೆ ಸುಮಾರು 3 ಗಂಟೆಗೆ ಗುಡ್ಡದ ತುದಿ ತಲುಪಿದರೆ ಇವಿಷ್ಟನ್ನು ನೋಡೋ ಹೊತ್ತಿಗೆ  5 ಗಂಟೆ ಆಗಿಬಿಡುತ್ತೆ.


ಅಷ್ಟರ ನಂತರ ನಿಮ್ಮ ಕಣ್ಣಿಗೆ ಬಿಡುವಿಲ್ಲ. ತ್ರೇತಾಯುಗದಲ್ಲಿ ಹನುಮಂತನಿಗೆ ಸೂರ್ಯ ಹಣ್ಣಿನಂತೆ ಕಂಡಿದ್ದನಂತೆ. ಅದ್ಹೇಗೇ ಅಂತಾ ಒಮ್ಮೊಮ್ಮೆ ಅನುಮಾನ ಬರ್ತಿತ್ತು. ಆದ್ರೆ ಇಲ್ಲಿ ಸೂರ್ಯನನ್ನು ನೋಡಿದ ನಂತ್ರಾ ಈ ಅನುಮಾನ ಪೂರ್ತಿ ಬಗೆಹರಿತು. ಅವತ್ತಿನ ಡ್ಯೂಟಿ ಮುಗಿಸಿ ಹೊರಡೋದಕ್ಕೆ ರೆಡಿಯಾಗಿದ್ದ ಸೂರ್ಯ ಬಂಗಾರದ ಬಟ್ಟಲಂತೆ ಮಿನುಗುತ್ತಿದ್ದ. ತನ್ನ ಬಣ್ಣಮಾತ್ರದಿಂದಲೇ ಕಣ್ಮನ ಸೆಳೆಯುತ್ತಿದ್ದ. ಅಸ್ತಂಗತವಾಗುವ ಸ್ವಲ್ಪ ಮೊದಲು ಶಶಿ ನೀಡವ ತಂಪನ್ನೇ ನೀಡುತ್ತಿದ್ದ. ಆದರೆ ಹೊಟ್ಟೆಕಿಚ್ಚಿಗೋ ಎಂಬಂತೆ ಸ್ವಲ್ಪ ಸಮಯದಲ್ಲೇ ಕಣ್ಮರೆಯಾಗಿಬಿಟ್ಟ.

ಇನ್ನು ಸ್ವಲ್ಪ ಹೊತ್ತು ಸೂರ್ಯ ಹೀಗೇ ಇರಬೋದಿತ್ತು ಎಂಬ ಭಾವ ಮನಸ್ಸಿನ ಮೂಲೆಯಲ್ಲೆಲ್ಲೋ ಮೂಡುತ್ತಿರುತ್ತದೆ. ಹಾಗೆಯೇ ಅಲ್ಲಿಂದ ವಾಪಸ್ಸಾಗುವಾಗ ಮನಸ್ಸಿನಲ್ಲಿ ಮತ್ತೊಂದು ಸಂಕಲ್ಪವೂ ಆಗಿರುತ್ತೆ.
ಇನ್ನೊಮ್ಮೆ ಇಲ್ಲಿಗೆ ಬರಬೇಕು...

3 comments:

  1. Idanna odida mele nanu ond sathi allige hogabekenisutthide... Good bavayya... Keep it up Village(to city)Guys...

    ReplyDelete
  2. to sandesh
    ನಿಜಕ್ಕೂ ನೋಡ್ಲೇಬೇಕಾದ ಜಾಗ...ತುಂಬಾ ಚೆನ್ನಾಗಿದೆ...ನಾನೂ ಬರ್ತೀನಿ ಒಮ್ಮೆ ಹೋಗೋಣ ಹ್ಯಾಗೆ

    ReplyDelete