Tuesday, June 7, 2011

ಅಭಿವೃದ್ಧಿಯೊಂದೇ ಮಂತ್ರವಾಗಬೇಕಾ...?

- ಅಶ್ವತ್ಥ ಹೆಗಡೆ

ಸುತ್ತಲೂ ದಟ್ಟ ಕಾನನ, ಹಚ್ಚಹಸುರಿನ ವನರಾಶಿ, ಮುಗಿಲೆತ್ತರಕ್ಕೆ ಬೆಳೆದ ಮರಗಳು, ಸ್ವಚ್ಛಂದವಾಗಿ ವಿಹರಿಸುತ್ತಿರುವ ಕಾಡುಪ್ರಾಣಿಗಳು, ಇವೆಲ್ಲದರ ಮಧ್ಯೆ ನಿಮಗೆ ಕೇಳುತ್ತದೆ ಜುಳುಜುಳು ನಿನಾದ. ಹೌದು ಅದೇ ನೀವು ಅಷ್ಟು ದೂರದಿಂದ ನೋಡಲೆಂದು ಬಂದ ..... ಜಲಪಾತ.

ಯಾವುದೇ ಪತ್ರಿಕೆ ಅಥವಾ ಟಿವಿಯಲ್ಲಿ ಜಲಪಾತವೊಂದರ ಪರಿಚಯ ಹೀಗೆ ಆರಂಭವಾಗುತ್ತದೆ. ಮುಂದುವರಿಯುವ ಪತ್ರಿಕಾ ನುಡಿಚಿತ್ರ (ಟಿವಿಗಳಿಗೂ ಇದು ಅನ್ವಯಿಸುತ್ತಿವೆ)ಆ ಜಲಪಾತ ಎಲ್ಲಿದೆ? ಹೇಗೆ ಹೋಗಬೇಕು? ಅಲ್ಲಿ ನೋಡುವುದಕ್ಕೆ ಏನೆಲ್ಲಾ ಇದೆ? ಎಂಬುದರ ಕುರಿತು ಮಾಹಿತಿ ನೀಡುತ್ತಾ ಹೋಗುತ್ತದೆ. ಇಲ್ಲಿಯವರೆಗೂ ಓಕೆ. ಆದರೆ ಮುಂದೆ ಆರಂಭವಾಗುತ್ತದೆ ನೋಡಿ...
ಆದರೆ ಈ ಸ್ಥಳ ಇಷ್ಟೊಂದು ಸುಂದರವಾಗಿದ್ದರೂ ಇಲ್ಲಿ ಮೂಲಭೂತ ಸೌಕರ್ಯ ಎಂಬುದು ಮರೀಚಿಕೆ. ಜಲಪಾತದವರೆಗೆ ಹೋಗಲು ಸರಿಯಾದ ರಸ್ತೆಗಳಿಲ್ಲ, ಅಂತೂ ಕಷ್ಟಪಟ್ಟು ಹೋದಿರಿ ಅಂದ್ರೂ ಅಲ್ಲಿ ನಿಂತುಕೊಳ್ಳುವುದಕ್ಕೂ ಸರಿಯಾದ ಸ್ಥಳ ಇಲ್ಲ, ತಿಂಡಿ ತೀರ್ಥಗಳಿಗೆ ಅಂಗಡಿ ಇಲ್ಲ, ವಸತಿ ಗೃಹಗಳಿಲ್ಲ ಇಲ್ಲಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಇನ್ನು ಟಿವಿಯಲ್ಲಾದರೆ ಇಲ್ಲಿನ ಪ್ರವಾಸಿಗರು ತಮ್ಮ ಕಷ್ಟವನ್ನು ಹೇಗೆ ತೋಡಿಕೊಳ್ಳುತ್ತಾರೆ ನೀವೇ ನೋಡಿ' ಅಂತಾ ಮೈಕ್ ಹಿಡಿದು ಒಂದು ಬೈಟ್ ತೋರಿಸಿಬಿಡುತ್ತಾರೆ.
ಹೀಗೆ ಓದಿದಾಗ ನನ್ನಲ್ಲಿ ಮೂಡುವ ಪ್ರಶ್ನೆ ಏನಂದ್ರೆ ಅಂತಹ ಪ್ರಕೃತಿಯ ಮಡಿಲಲ್ಲಿರುವ ಪ್ರೇಕ್ಷಣೀಯ ಸ್ಥಳಗಳಿಗೆ ಅಷ್ಟೊಂದು ವ್ಯವಸ್ಥೆ ಕಲ್ಪಿಸುವ ಅಗತ್ಯ ಇದೆಯಾ ? ಒಂದೊಮ್ಮೆ ವ್ಯವಸ್ಥೆ ಕಲ್ಪಿಸಿದ್ರು ಅಂತಿಟ್ಟುಕೊಳ್ಳೋಣ ಆಗ ಅವು ತಮ್ಮ ಮೂಲ ಸ್ವರೂಪ ಉಳಿಸಿಕೊಳ್ಳುತ್ತವೆಯಾ? ಚಾರಣ, ಟ್ರೆಕ್ಕಿಂಗ್ ಅನ್ನೊದಕ್ಕೆ ಅರ್ಥ ಎಲ್ಲಿ ಉಳಿಯುತ್ತೆ.?

ಉದಾಹರಣೆಗೆ ಉತ್ತರ ಕನ್ನಡದ ಮಟ್ಟಿಗೆ ಹೇಳುವುದಾದರೆ ಇಲ್ಲಿರುವ ಜಲಪಾತಗಳು ಒಂದಕ್ಕೊಂದು ಪೈಪೋಟಿ ನೀಡುವಷ್ಟು ಸುಂದರವಾದವು. ಇಲ್ಲಿಗೆ ಹೋದರೆ ಒಂದು ಸಲ ಮೈಂಡ್ ರೀಫ್ರೆಶ್ ಆಗೋದರಲ್ಲಿ ಸಂಶಯವೇ ಇಲ್ಲ. ಕಾಲುದಾರಿಯಲ್ಲಿ ಎದ್ದು ಬೀಳುತ್ತಾ, ಕಾಡಿನಲ್ಲೇ ಸಿಗುವ ಹಣ್ಣುಗಳನ್ನ ತಿನ್ನುತ್ತ ಹೋಗುವ ಆನಂದ ಅನುಭವಿಸಿದವರಿಗೊಂದೇ ಗೊತ್ತು. ಅದು ಇದ್ದಂತೆ ಬಿಟ್ಟರೇ ಚೆನ್ನ. ಸೊಕ್ಕಿದ್ದವನು ಖಂಡಿತಾ ಯಾಣ ನೋಡಿ ಬರ್ತಾನೆ. ಧೈರ್ಯ ಇದ್ದವನು ಬುರುಡೆ ಫಾಲ್ಸ್ ಅಥವಾ ವಾಟೆಹೊಳೆ ಫಾಲ್ಸ್ ಗೆ ಇಳೀತಾನೆ.

ಅದನ್ನು ಬಿಟ್ಟು ಎಲ್ಲಾ ಜಲಪಾತಗಳು, ಸ್ಥಳಗಳಿಗೆ ಆಧುನಿಕ ಸೌಲಭ್ಯ ಕಲ್ಪಿಸಿದರು ಅಂತಿಟ್ಟುಕೊಳ್ಳೋಣ, ಆಗ ಅಲ್ಲಿಯ ಸ್ಥಿತಿ ಏನಾಗುತ್ತೆ ಸ್ವಲ್ಪ ಯೋಚಿಸಿ. ಮಾನವನ ದಾಂಗುಡಿಯಿಂದ ಹೆದರಿ ಕಾಡು ಪ್ರಾಣಿಗಳು ಪೇರಿ ಕೀಳುತ್ವೆ. ಕೆಲವು ಸಂತತಿಯೂ ನಶಿಸಬಹುದು. ಇನ್ನು ಹೊಟೇಲ್, ಗೆಸ್ಟ್ ಹೌಸ್ ಗಳನ್ನಂತೂ ಮಾಡಿದ್ರೆ ಕೇಳೋದೇ ಬೇಡ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಮಯ, ಕೊಳಚೆಯ ಸಾಮ್ರಾಜ್ಯ. ಜಲಪಾತದ ನೀರಿಗೂ, ಕೆಂಗೇರಿ ತೀರ್ಥಕ್ಕೂ ವ್ಯತ್ಯಾಸವೇ ಇಲ್ಲದಂತೆ ಮಾಡಿದರೂ ಆಶ್ಚರ್ಯ ಇಲ್ಲ. ಅಭಿವೃದ್ಧಿ ಮಾಡಿದೀವಿ ಅಂತಾ ಹಣ ಕೀಳೋದಕ್ಕೂ ಸರ್ಕಾರಗಳು ಮುಂದಾಗ್ತವೆ. ಅಭಿವೃದ್ಧಿ ಹೆಸರಲ್ಲಿ ನೈಜ ಸೌಂದರ್ಯವನ್ನೇ ಕಳೆದುಕೊಂಡು ಸೊರಗುತ್ತಿರುವ ಅದೆಷ್ಟೋ ಪ್ರವಾಸಿ ಸ್ಥಳಗಳ ಉದಾಹರಣೆ ನಮ್ಮ ಕಣ್ಮುಂದಿವೆ.

ಇಷ್ಟಕ್ಕೂ ನಮ್ಮ ಮಾಧ್ಯಮಗಳು ಈ ವಿಷಯದಲ್ಲಿ ತುಂಬಾ ಎಡವುತ್ತಿವೆ ಅನ್ನಿಸ್ತಿದೆಯಾ.? ಜನರಿಗೆ ಸಹಾಯ ಮಾಡುತ್ತೇವೆ ಅಂತಾ ಹೇಳ್ತಾ ಅವರಿಗೆ ಗೊತ್ತಿಲ್ಲದಂತೆ ಪರಿಸರವನ್ನು ಹಾಳುಮಾಡುತ್ತಿವೆಯಾ.? ಅಭಿವೃದ್ಧಿ ಪತ್ರಿಕೋದ್ಯಮ ಅನ್ನೋದನ್ನ ತಪ್ಪಾಗಿ ಗೃಹಿಸಿದ್ದರಿಂದಲೇ ಇಷ್ಟೆಲ್ಲಾ ಆಗುತ್ತಿವೆಯಾ.? ಜನರೂ ಕೂಡ ಸೋಮಾರಿಗಳಾಗ್ತಾ, ಹುರುಪು ಕಳೆದುಕೊಳ್ತಾ, ಇಂತಹ ಸೌಲಭ್ಯಗಳೆಲ್ಲಾ ಬೇಕು ಅಂತಾ ಅಪೇಕ್ಷೆ ಪಡ್ತಿದ್ದಾರಾ.? ದಯವಿಟ್ಟು ಗೊತ್ತಾದವರು ಹೇಳಿ...

ಕೊನೆಹನಿ ಎಲ್ಲರೂ ಹಿಮಾಲಯದೆತ್ತರದಲ್ಲಿ ನಿಂತು ಸುಂದರ ದೃಶ್ಯವನ್ನು ನೋಡ್ಬೇಕು ಅಂತಾ ಹಿಮಾಲಯಕ್ಕೆ ಮೆಟ್ಟಿಲು ಅಥವಾ ಟ್ರ್ಯಾಲಿ ವ್ಯವಸ್ಥೆ ಮಾಡೋದಕ್ಕೆ ಸಾಧ್ಯಾನಾ ?

Tuesday, February 1, 2011

ನಾವು ಪತ್ರಕರ್ತರು, ನಮ್ಮ ಲೈಫು ಇಷ್ಟೇನೆ.....!!!

- ಅಶ್ವತ್ಥ ಕೋಡಗದ್ದೆ
ಬೆಳಗಿನ ಜಾವ ಸುಮಾರು 5 ಗಂಟೆ. ಖುರ್ಚಿಯ ಮೇಲೆ ಕುಳಿತರೂ ಕುಳಿತ ಹಾಗಲ್ಲ. ಏನೋ ಚಡಪಡಿಕೆ, ಮತ್ತೆನನ್ನೋ ಕಳೆದುಕೊಂಡಂತೆ. ಮೊದಲೇ ನೈಟ್ ಶಿಫ್ಟ್ ಅಂತಾ ಅಸಹನೆ ಬೇರೆ. ಅಂತಹುದರಲ್ಲಿ ಹೀಗಾಗಿಬಿಟ್ರೆ ಅದೆಷ್ಟು ಸಿಟ್ಟು ಬರಬೇಡ ಹೇಳಿ. ನಿನ್ನೆಯಂತೂ ಹಾಗಾಯ್ತು. ಇವತ್ತಾದ್ರೂ ಸಿಗುತ್ತಾ ಅಂದ್ರೆ ಅದೂ ಇಲ್ಲ. ಅಷ್ಟಕ್ಕೂ ನಾನು ಬಯಸ್ತಿರೋದು ಏನನ್ನಾ.? ನಾನೇನು ಕೋಟಿ ಕೋಟಿ ರೂಪಾಯಿ ಬೇಕು ಅಂತಿದೀನಾ? ಹಾಗೇನಿಲ್ವಲ್ಲ... ಆಪ್ಟರಾಲ್ ಒಂದು ಆಕ್ಸಿಡೆಂಟ್, ಮೂರು ಜನರ ಸಾವು. ಆಟ್ಲೀಸ್ಟ್ ಒಂದು ಕೊಲೆ. ಅದೂ ಆಗ್ಲಿಲ್ಲಾ ಅಂದ್ರೆ ಬೆಳಗಿನ ನ್ಯೂಸ್ ಗೆ ಫಸ್ಟ್ ಹೆಡ್ ಲೈನ್ ಮಾಡ್ಕೊಳ್ಳೋದಾದ್ರೂ ಹೇಗೆ. ಎಲ್ಲಾ ಹಳಸಲು ಸುದ್ದಿ. ಅದೇ ರಾಜಕಾರಣಿಗಳು ನಿನ್ನೆ ಎರಚಿಕೊಂಡ ಕೆಸರು, ಮಂತ್ರಿಗಳು ನೀಡಿದ ಸುಳ್ಳು ಭರವಸೆ. ಅದಕ್ಕೆಲ್ಲಾ ಯಾರಾದ್ರೂ ಸುದ್ದಿ ಅಂತಾರಾ.....

ಹೌದು... ಇದು ನನ್ನೊಬ್ಬನ ಆಲೋಚನಯಾಗ್ಲೀ, ಮಾತಾಗ್ಲೀ  ಅಲ್ಲಾ... ನನ್ನಂತ ಅದೆಷ್ಟೋ ಪತ್ರಕರ್ತರು ಹೀಗೇ ಆಲೋಚನೆ ಮಾಡ್ತಾರೆ ಅಂದ್ರೆ ವೀಕ್ಷಕರಿಗೆ ಆಶ್ಚರ್ಯ ಆದ್ರೆ ಅದು ಅವರ ತಪ್ಪಲ್ಲ. ಸುದ್ದಿಮನೆಗಳಲ್ಲಿ ಇವತ್ತು ಇರೋ ವಸ್ತುಸ್ಥಿತಿನೇ ಅಂತಾದ್ದು. ರಾತ್ರಿ ಮೂರು ಜನಾನಾದ್ರೂ ಸತ್ತಿಲ್ಲ ಅಂದ್ರೆ ಬೆಳಗ್ಗೆ ಸುದ್ದಿನೇ ಇಲ್ಲ ಎಂಬಂತೆ. ಅದ್ರಲ್ಲೂ  ಟಿವಿ ಚಾನೆಲ್ ಗಳಲ್ಲಿ ಈ ಗೊಣಗಾಟ ವಿಪರೀತ. ಇವತ್ತೇನ್ರಿ ಯಾರೂ ಸತ್ತೂ ಇಲ್ಲ ಅನ್ನೋ ಅಸಹನೆ ಬೇರೆ. ಎಲ್ಲೋ ಒಂದು ಕೊಲೆ ನಡೀತು ಅಂದ್ರೆ ಅಬ್ಬಾ ಫಸ್ಟ್ ಹೆಡ್ ಲೈನ್ ಗೆ ಸುದ್ದಿ ಆಯ್ತಲ್ಲಾ ಅನ್ನೋ ಖುಷಿ. ಪಾಪ ಇದು ಪತ್ರಕರ್ತರ ತಪ್ಪಲ್ಲ. ಈ ತಪ್ಪಿಗೆ ನೀವು ಅವರನ್ನಾ ಹೊಣೆಗಾರರನ್ನಾಗಿಸಬೇಡಿ. 24 ಗಂಟೆ ಸುದ್ದಿ ಕೊಡ್ಬೇಕು ಅನ್ನೋ ಕರ್ಮದಲ್ಲಿ ಬಿದ್ದಿರೋ ಅವರಾದ್ರೂ ಏನು ಮಾಡ್ತಾರೆ ಹೇಳಿ.
ನಾಲ್ಕೂವರೆ ವರ್ಷದ ಹಿಂದೆ ನಾನು ಈಟಿವಿಯ ಹೈದರಾಬಾದ್ ಆಫೀಸ್ ನಲ್ಲಿ ಕುಳಿತು ಮೊದಲ ದಿನ ನೈಟ್ ಶಿಫ್ಟ್ ಮಾಡಿ ಬೆಳಗಿನ ಜಾವ ಆಗ್ತಿದ್ದಂತೆ ನನ್ನ ಸೀನಿಯರ್ ಬಾಯಿಂದ ಈ ಮಾತುಗಳನ್ನಾ ಕೇಳಿ ಕಂಗಾಲಾಗಿಬಿಟ್ಟಿದ್ದೆ. ಒಬ್ಬರೇ ಸತ್ತಿದ್ದಾ? ಸ್ಕ್ರಾಲ್ ಗೆ ಹಾಕ್ಬಿಡಿ, (ಟಿವಿಯಲ್ಲಿ ಕೆಳಭಾಗದಲ್ಲಿ ಅಕ್ಷರ ರೂಪದಲ್ಲಿ ಚಿಕ್ಕದಾಗಿ ಸುದ್ದಿ ಹೋಗುತ್ತಿರುವುದಕ್ಕೆ ಸ್ಕ್ರಾಲ್ ಅಂತಾರೆ. ಕಾಂಜಿಪಿಂಜಿ ಸುದ್ಧಿಗಳಿಗೆ ಮಾತ್ರ ಅಲ್ಲಿ  ಅವಕಾಶ) ಓ ನಾಲ್ಕು ಜನ ಸತ್ತಿದ್ದಾರಾ ಬೇಗನೇ ಬ್ರೇಕಿಂಗ್ ಕೊಡಿ. (ದೊಡ್ಡ ದೊಡ್ಡ ಅಕ್ಷರದಲ್ಲಿ ಟಿವಿ ಸ್ಕ್ರೀನ್ ತುಂಬ ಗ್ರಾಫಿಕ್ಸ್ ಬರುವುದು) ಬೇರೆ ಚಾನೆಲ್ ಗಿಂತ ಮುಂಚೆ ನಾವೇ ಕೊಡ್ಬೇಕು ಅನ್ನೋ ಮಾತುಗಳನ್ನ ಕೇಳಿದಾಗ ಆಶ್ಚರ್ಯ ಆಗ್ತಿತ್ತು. (ಪತ್ರಕರ್ತರಾದ ನಾವು ಸಾವಿಗೆ ಬೆಲೆ ಕಟ್ಟೋದು ಹೇಗೆ ಅಂತಾ ನಾನು  ಕಲಿತುಕೊಂಡದ್ದು ಹಾಗೆ. )

ಇದೇನು ಯಾರಾದ್ರೂ ಸಾಯಲಿ ಅಂತಾ ಇಷ್ಟು ಸಲೀಸಾಗಿ ಹೇಳ್ತಾರಲ್ಲಾ ಅಂತಾ ಆಶ್ಚರ್ಯ ಆಗ್ಬಿಟ್ಟಿದ್ದೆ. ಜೀವದ ಬೆಲೆ ಇವರಿಗೆ ಗೊತ್ತಿಲ್ವಾ. ಅದೂ ಆಕ್ಸಿಡೆಂಟ್, ಕೊಲೆಯಾಗಿ ಸಾಯಲಿ ಅಂದರೆ ಏನು ಕಥೆ. ಯಾವುದೋ ಫ್ಯಾಕ್ಟರಿಗೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಭೂದಿ ಆಗ್ಲಿ ಅನ್ನೋದಕ್ಕೆ ಹೇಗೆ ಇವರಿಗೆ ಮನಸ್ಸು ಬರುತ್ತೆ ಅಂತಾ ಆವತ್ತು ತುಂಬಾ ಆಲೋಚನೆ ಮಾಡಿದ್ದೆ. ಇವರಿಗೇನು ಸಂವೇದನೆಗಳೇ ಇಲ್ವಾ ಅಂತಾ ನನ್ನನ್ನು ನಾನೇ ಪ್ರಶ್ನಿಸಿಕೊಂಡಿದ್ದೆ.
ನಾಲ್ಕು ತಿಂಗಳು ಅಷ್ಟೇ ಅದೆಲ್ಲಾ ರೂಡಿಯಾಗ್ಬಿಟ್ಟಿತ್ತು. ಜಗತ್ತಲ್ಲಿ ಅನಾಹುತಗಳಾಗದಿದ್ರೆ ಸುದ್ದಿ ಇಲ್ಲ ಅನ್ನೋದು ಗೊತ್ತಾಗೋದಕ್ಕೆ ಪ್ರಾರಂಭವಾಯ್ತು. ವರ್ಷದ ಬಳಿಕ ನಾನೂ ಹಾಗೇ ಗೊಣಗುವುದನ್ನಾ, ಬಳಿಕ ಅಸಹನೆಯಿಂದ ಹೊರಳಾಡೋದನ್ನಾ ಕಲಿತುಬಿಟ್ಟು. ಇವತ್ತಿಗೂ ಅದನ್ನ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದೇನೆ. ಹೈದರಾಬಾದ್ ನಿಂದ ಈಟಿವಿ ಬಿಟ್ಟು ಬೆಂಗಳೂರಿಗೆ ಬಂದೆ. ಆದ್ರೆ ನನ್ನ ಆ ಗೊಣಗಾಟವನ್ನ ಸ್ವಲ್ಪನೂ ಕಡಿಮೆ ಮಾಡಿಲ್ಲ.ಸ್ವಲ್ಪ ಜಾಸ್ತಿನೇ ಆಗಿದೆ ಅನ್ನಬಹುದೆನೋ. ಯಾಕೆಂದ್ರೆ ನಾನು ಬಂದಿದ್ದು 24 hours news channel ಗೆ. 24 ಗಂಟೆ ಸುದ್ದಿ ಕೊಡ್ಲೇ ಬೇಕಲ್ಲ. ನಮ್ಮ ನೈಟ್ ಬೀಟ್  ಕ್ರೈಂ ರಿಪೋರ್ಟರ್ ಹತ್ರಾ ದಿನವೂ ಕೇಳೋದು.. ಏನೂ ಕ್ರೈಂ ಇಲ್ವಾ ಸಾರ್ ಅಂತಾ... ಅವರೇನಾದ್ರೂ ಇದೆ ಅಂದ್ರೆ ಇಬ್ಬರಿಗೂ ಖುಷಿ.. ಕೆಲವೊಮ್ಮೆ ಅವರೂ ಹೇಳೋದು ಹಾಗೆ ಇರುತ್ತೆ. ಏನ್ ಸಾರ್ ಈ ವಾರದಲ್ಲಿ ನೈಟ್ ಒಂದು ಮರ್ಡರ್ ಆಗಿದ್ದು ಬಿಟ್ರೆ ಏನೇನೂ ಇಲ್ಲಾ ಸಾರ್... ನೈಟ್ ಸುದ್ದಿನೇ ಇಲ್ಲಾ. ಸಖತ್ ಬೋರ್ ಆಗ್ಬಿಟ್ಟಿದೆ.. ಇದಕ್ಕೆ ಏನಂತೀರಿ ?
ಅಂದು ಬೇರೆಯವರನ್ನ ನೋಡಿ ಇವರಿಗೇನು ಸಂವೇದನೆಗಳಿಲ್ವಾ ಅಂತಾ ನಾನು ಪ್ರಶ್ನಿಸ್ತಿದ್ದೆ. ಇವತ್ತು ನನ್ನನ್ನು ನಾನು ಪ್ರಶ್ನಿಸಿಕೊಳ್ತಾ ಇದ್ದೇನೆ. ನಾನು ಸಂವೇದನೆಗಳನ್ನಾ ಉಳಿಸಿಕೊಂಡಿದ್ದೇನಾ. ಮನಸ್ಸು ಅನ್ನೋದು ಸತ್ತು ಹೋಗ್ಬಿಟ್ಟಿದೆಯಾ. ? ಹೀಗೆ ಮುಂದುವರಿದ್ರೆ ಮುಂದೊಂದು ದಿನ ಸಂವೇದನೆ, ಸಂಬಂಧ ಅನ್ನೋ ಶಬ್ದವೇ ನಮ್ಮಂತಾ ಪತ್ರಕರ್ತರಿಂದಾ ರೆಯಾಗಿ ಬಿಡುತ್ತಾ? ಡಿಕ್ಷ್ನೆರಿಗಳನ್ನ ಹಿಡ್ಕೊಂಡು ಅದರ ಅರ್ಥ ಹುಡುಕಬೇಕಾಗುತ್ತಾ? ಹಾಗೆ ಆದ್ರೂ ಆಶ್ಚರ್ಯ ಇಲ್ಲಾ ಅನ್ಸತ್ತೆ ಅಲ್ವಾ….!?  
ಟಿಆರ್ ಪಿ ಅನ್ನೋ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿರೋ ನಮ್ಮಲ್ಲಿ ಈ ಸಂವೇದನೆಗಳಿಗೆಲ್ಲಾ ಮೊಳೆತು ಗಿಡವಾಗಿ ಹೂವು ಬಿಡೋದು ಕಷ್ಟ ಅನ್ಸಿಬಿಟ್ಟಿದೆ.

Monday, January 17, 2011

ಜ್ಞಾನ-ವಿಜ್ಞಾನ

ಕಿವುಡರಲ್ಲಿ ಮೂಡಿತು ಆಶಾಭಾವನೆ.....!?

-ಸುಭಾಸ್ ಧೂಪದಹೊಂಡ
ನಮಗೆ ಕಿವಿ ಇಲ್ಲದಿದ್ರೆ ಏನಾಗ್ತಿತ್ತು. ಒಂದು ಕ್ಷಣ ಯೋಚಿಸಿ.. ಈ ಜಗತ್ತಿನಲ್ಲಿ ಮಾನವರ ಸಂವಹನ ಇಷ್ಟು ಬೆಳೆಯಲು ಸಾಧ್ಯವೇ ಇರಲಿಲ್ಲ ಅಲ್ವಾ...? ನಿಮ್ಮ ಕಲ್ಪನೆ ತಪ್ಪು. ಯಾಕೆಂದ್ರೆ ಮಾನವ ಕಿವಿ ಇಲ್ಲದೆನೂ ಕೇಳಬಹುದು.!!!

ಹೌದು ಈ ವಿಷಯ ತೀರ ಇತ್ತೀಚೆಗೆ ಸಾಭೀತಾಗಿದೆ. ಈ ಸಂಶೋಧನೆಯನ್ನ  ಅಮೆರಿಕಾ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಆದರೆ ಅದಲ್ಲ ವಿಶೇಷ. ಈ ವಿಷಯವನ್ನು ಆಧರಿಸಿ ಮಂಗಳೂರು ಮೂಲದ ವಿಜ್ಞಾನಿ ನಾರಾಯಣ ಕರ್ಕೆರಾ ಎಂಬುವವರು ಕಿವುಡರಿಗೆ ಅನುಕೂಲವಾಗಬಲ್ಲ ಒಂದು ಯಂತ್ರ ಕಂಡುಹಿಡಿದಿದ್ದಾರೆ.

ಇತರ ಪ್ರಾಣಿಗಳಂತೆ ಮಾನವನ ಚರ್ಮ ಸಹ ಸಂವಹನವನ್ನ ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಆದರೆ ಅದನ್ನ ಸೂಕ್ಷ್ಮವಾಗಿ ಬಳಸದ ಕಾರಣ ಸಂವಹನದ ಮೂಲಕ ನಮ್ಮ ಮೆದುಳಿಗೆ ಸಂಜ್ಞೆ ಮುಟ್ಟಿಸುವ ಚರ್ಮದ ಇನ್ನೊಂದು ಕಾರ್ಯ ಮಾನವನ ವಿಕಾಸದ ಹಂತದಲ್ಲಿ ನಿಷ್ಕ್ರಿಯವಾಗಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.
 ನಮ್ಮ ಮೆದುಳಿನಲ್ಲಿ ಶಬ್ದವನ್ನ ಗ್ರಹಿಸುವ ಮತ್ತು ಅರ್ಥೈಸುವ ವಿಭಾಗಕ್ಕೆ ನರಗಳ ಸಹಾಯದಿಂದ ಸುದ್ದಿ ಮುಟ್ಟಿಸುವುದು ಕಿವಿಯ ಕೆಲಸ. ನಮ್ಮ ಸುತ್ತ ಉತ್ಪತ್ತಿಯಾಗುವ ಶಬ್ದಗಳು ನಮ್ಮ ಕರ್ಣಪಟಲಕ್ಕೆ ಹೋಗಿ ಬಡಿಯುತ್ತದೆ. ಕಣ್ಣ ಪಟಲದಲ್ಲಿ ಉಂಟಾದ ಕಂಪನ ನರಗಳ ಮೂಲಕ ಮಿದುಳಿಗೆ ರವಾನೆಯಾಗಿ ಅಲ್ಲಿ ಶಬ್ದದ ಗ್ರಹಿಕೆಯಾಗುತ್ತದೆ.
ಈ ಕಿವಿಯಲ್ಲಿರುವ  ಪಟಲ ಅಥವಾ ಮಿದುಳಿನೊಂದಿಗೆ ಸಂಪರ್ಕ ಕಲ್ಪಿಸುವ ನರಗಳ ದೌರ್ಬಲ್ಯದಿಂದ ಕೆಲವರಿಗೆ ಕಿವಿ ಕೇಳಿಸದು. ಆದರೆ ಇನ್ನ ಕಿವುಡುತನ ಸಮಸ್ಯೆ ತಪ್ಪಲಿದೆ.
ಚರ್ಮದ ಮೂಲಕ ನಮ್ಮ ಸುತ್ತ ಉಂಟಾಗುವ ಕಂಪನವನ್ನು ನಾವು ಗ್ರಹಿಸಿ ಶಬ್ದಗಳನ್ನುಕೇಳಬಹುದು. ಈ ಹೊಸ ಸಂಶೋಧನೆಯಿಂದ ಸಂಪರ್ಕ ತಂತ್ರಜ್ಞಾನದಲ್ಲಿ  ಭಾರೀ ಬದಲಾವಣೆ ಆಗಲಿದೆ.

ನಮ್ಮವರ ಸಾಧನೆ
ಈ ತಂತ್ರಜ್ಞಾನ ಆಧರಿಸಿ ಮಂಗಳೂರು ಮೂಲದ ಅಣು ವಿಜ್ಞಾನಿ ನಾರಾಯಣ ಕರ್ಕೆರಾ ಆಶಾ ಬಾಡಿ ಪೋನ್ ಎಂಬ ಹೊಸ ಚಿಕ್ಕ ಯಂತ್ರವೊಂದನ್ನ ಕಂಡುಹಿಡಿದಿದ್ದಾರೆ. ಇದ್ನ ನಿಮ್ಮ ದೇಹದ ಯಾವುದೇ ಭಾಗದ ಚರ್ಮಕ್ಕೆ ತಾಗಿಸಿ ಹಿಡಿದರೆ ನೀವು ಕಿವಿಯಲ್ಲಿ ಕೇಳುವುದಕ್ಕಿಂತ ಸ್ಪಷ್ಟವಾಗಿ ಕೇಳಬಲ್ಲಿರಿ. ಈ ಸಾಧನ ಕಿವುಡರಿಗೆ ಆಶಾಕಿರಣವಾಗಿದೆ.


ಮುಂಬೈನ ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್ ನಲ್ಲಿ ಅಣುವಿಜ್ಞಾನಿಯಾಗಿ ಸೇವೆ ಸಲ್ಲಿಸಿದ ನಾರಾಯಣ ಕರ್ಕೆರಾ ಈಗ ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸ ಯಂತ್ರಕ್ಕೆ ಪೇಟೆಂಟ್ ಸಹ ಪಡೆಯಲು ನಿರ್ಧರಿಸಿದ್ದಾರೆ. ಈ ಸಾಧನವನ್ನು ಸಧ್ಯ ಅಗತ್ಯವಿದ್ದವರಿಗೆ 15 ರಿಂದ 20 ಸಾವಿರಕ್ಕೆ ಮಾಡಿಕೊಡುತ್ತಿದ್ದಾರೆ. ಇದು ಕಿವುಡರಿಗೆ ಆಶಾಕಿರಣವಾಬೇಕಿದ್ದರೆ ಸರ್ಕಾರ ಪ್ರೋತ್ಸಾಹ ನೀಡ್ಬೇಕು. ಕಂಪೆನಿಗಳು ಹಣಕಾಸಿನ ನೆರವು ಕೊಡ್ಬೇಕು ಅನ್ನೋದು ನಾರಾಯಣ ಕರ್ಕೆರಾ ಅವರ ಮನವಿ. ಮನವಿಗೆ ಸ್ಪಂದನೆ ಸಿಗುತ್ತಾ ?