Tuesday, June 7, 2011

ಅಭಿವೃದ್ಧಿಯೊಂದೇ ಮಂತ್ರವಾಗಬೇಕಾ...?

- ಅಶ್ವತ್ಥ ಹೆಗಡೆ

ಸುತ್ತಲೂ ದಟ್ಟ ಕಾನನ, ಹಚ್ಚಹಸುರಿನ ವನರಾಶಿ, ಮುಗಿಲೆತ್ತರಕ್ಕೆ ಬೆಳೆದ ಮರಗಳು, ಸ್ವಚ್ಛಂದವಾಗಿ ವಿಹರಿಸುತ್ತಿರುವ ಕಾಡುಪ್ರಾಣಿಗಳು, ಇವೆಲ್ಲದರ ಮಧ್ಯೆ ನಿಮಗೆ ಕೇಳುತ್ತದೆ ಜುಳುಜುಳು ನಿನಾದ. ಹೌದು ಅದೇ ನೀವು ಅಷ್ಟು ದೂರದಿಂದ ನೋಡಲೆಂದು ಬಂದ ..... ಜಲಪಾತ.

ಯಾವುದೇ ಪತ್ರಿಕೆ ಅಥವಾ ಟಿವಿಯಲ್ಲಿ ಜಲಪಾತವೊಂದರ ಪರಿಚಯ ಹೀಗೆ ಆರಂಭವಾಗುತ್ತದೆ. ಮುಂದುವರಿಯುವ ಪತ್ರಿಕಾ ನುಡಿಚಿತ್ರ (ಟಿವಿಗಳಿಗೂ ಇದು ಅನ್ವಯಿಸುತ್ತಿವೆ)ಆ ಜಲಪಾತ ಎಲ್ಲಿದೆ? ಹೇಗೆ ಹೋಗಬೇಕು? ಅಲ್ಲಿ ನೋಡುವುದಕ್ಕೆ ಏನೆಲ್ಲಾ ಇದೆ? ಎಂಬುದರ ಕುರಿತು ಮಾಹಿತಿ ನೀಡುತ್ತಾ ಹೋಗುತ್ತದೆ. ಇಲ್ಲಿಯವರೆಗೂ ಓಕೆ. ಆದರೆ ಮುಂದೆ ಆರಂಭವಾಗುತ್ತದೆ ನೋಡಿ...
ಆದರೆ ಈ ಸ್ಥಳ ಇಷ್ಟೊಂದು ಸುಂದರವಾಗಿದ್ದರೂ ಇಲ್ಲಿ ಮೂಲಭೂತ ಸೌಕರ್ಯ ಎಂಬುದು ಮರೀಚಿಕೆ. ಜಲಪಾತದವರೆಗೆ ಹೋಗಲು ಸರಿಯಾದ ರಸ್ತೆಗಳಿಲ್ಲ, ಅಂತೂ ಕಷ್ಟಪಟ್ಟು ಹೋದಿರಿ ಅಂದ್ರೂ ಅಲ್ಲಿ ನಿಂತುಕೊಳ್ಳುವುದಕ್ಕೂ ಸರಿಯಾದ ಸ್ಥಳ ಇಲ್ಲ, ತಿಂಡಿ ತೀರ್ಥಗಳಿಗೆ ಅಂಗಡಿ ಇಲ್ಲ, ವಸತಿ ಗೃಹಗಳಿಲ್ಲ ಇಲ್ಲಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಇನ್ನು ಟಿವಿಯಲ್ಲಾದರೆ ಇಲ್ಲಿನ ಪ್ರವಾಸಿಗರು ತಮ್ಮ ಕಷ್ಟವನ್ನು ಹೇಗೆ ತೋಡಿಕೊಳ್ಳುತ್ತಾರೆ ನೀವೇ ನೋಡಿ' ಅಂತಾ ಮೈಕ್ ಹಿಡಿದು ಒಂದು ಬೈಟ್ ತೋರಿಸಿಬಿಡುತ್ತಾರೆ.
ಹೀಗೆ ಓದಿದಾಗ ನನ್ನಲ್ಲಿ ಮೂಡುವ ಪ್ರಶ್ನೆ ಏನಂದ್ರೆ ಅಂತಹ ಪ್ರಕೃತಿಯ ಮಡಿಲಲ್ಲಿರುವ ಪ್ರೇಕ್ಷಣೀಯ ಸ್ಥಳಗಳಿಗೆ ಅಷ್ಟೊಂದು ವ್ಯವಸ್ಥೆ ಕಲ್ಪಿಸುವ ಅಗತ್ಯ ಇದೆಯಾ ? ಒಂದೊಮ್ಮೆ ವ್ಯವಸ್ಥೆ ಕಲ್ಪಿಸಿದ್ರು ಅಂತಿಟ್ಟುಕೊಳ್ಳೋಣ ಆಗ ಅವು ತಮ್ಮ ಮೂಲ ಸ್ವರೂಪ ಉಳಿಸಿಕೊಳ್ಳುತ್ತವೆಯಾ? ಚಾರಣ, ಟ್ರೆಕ್ಕಿಂಗ್ ಅನ್ನೊದಕ್ಕೆ ಅರ್ಥ ಎಲ್ಲಿ ಉಳಿಯುತ್ತೆ.?

ಉದಾಹರಣೆಗೆ ಉತ್ತರ ಕನ್ನಡದ ಮಟ್ಟಿಗೆ ಹೇಳುವುದಾದರೆ ಇಲ್ಲಿರುವ ಜಲಪಾತಗಳು ಒಂದಕ್ಕೊಂದು ಪೈಪೋಟಿ ನೀಡುವಷ್ಟು ಸುಂದರವಾದವು. ಇಲ್ಲಿಗೆ ಹೋದರೆ ಒಂದು ಸಲ ಮೈಂಡ್ ರೀಫ್ರೆಶ್ ಆಗೋದರಲ್ಲಿ ಸಂಶಯವೇ ಇಲ್ಲ. ಕಾಲುದಾರಿಯಲ್ಲಿ ಎದ್ದು ಬೀಳುತ್ತಾ, ಕಾಡಿನಲ್ಲೇ ಸಿಗುವ ಹಣ್ಣುಗಳನ್ನ ತಿನ್ನುತ್ತ ಹೋಗುವ ಆನಂದ ಅನುಭವಿಸಿದವರಿಗೊಂದೇ ಗೊತ್ತು. ಅದು ಇದ್ದಂತೆ ಬಿಟ್ಟರೇ ಚೆನ್ನ. ಸೊಕ್ಕಿದ್ದವನು ಖಂಡಿತಾ ಯಾಣ ನೋಡಿ ಬರ್ತಾನೆ. ಧೈರ್ಯ ಇದ್ದವನು ಬುರುಡೆ ಫಾಲ್ಸ್ ಅಥವಾ ವಾಟೆಹೊಳೆ ಫಾಲ್ಸ್ ಗೆ ಇಳೀತಾನೆ.

ಅದನ್ನು ಬಿಟ್ಟು ಎಲ್ಲಾ ಜಲಪಾತಗಳು, ಸ್ಥಳಗಳಿಗೆ ಆಧುನಿಕ ಸೌಲಭ್ಯ ಕಲ್ಪಿಸಿದರು ಅಂತಿಟ್ಟುಕೊಳ್ಳೋಣ, ಆಗ ಅಲ್ಲಿಯ ಸ್ಥಿತಿ ಏನಾಗುತ್ತೆ ಸ್ವಲ್ಪ ಯೋಚಿಸಿ. ಮಾನವನ ದಾಂಗುಡಿಯಿಂದ ಹೆದರಿ ಕಾಡು ಪ್ರಾಣಿಗಳು ಪೇರಿ ಕೀಳುತ್ವೆ. ಕೆಲವು ಸಂತತಿಯೂ ನಶಿಸಬಹುದು. ಇನ್ನು ಹೊಟೇಲ್, ಗೆಸ್ಟ್ ಹೌಸ್ ಗಳನ್ನಂತೂ ಮಾಡಿದ್ರೆ ಕೇಳೋದೇ ಬೇಡ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಮಯ, ಕೊಳಚೆಯ ಸಾಮ್ರಾಜ್ಯ. ಜಲಪಾತದ ನೀರಿಗೂ, ಕೆಂಗೇರಿ ತೀರ್ಥಕ್ಕೂ ವ್ಯತ್ಯಾಸವೇ ಇಲ್ಲದಂತೆ ಮಾಡಿದರೂ ಆಶ್ಚರ್ಯ ಇಲ್ಲ. ಅಭಿವೃದ್ಧಿ ಮಾಡಿದೀವಿ ಅಂತಾ ಹಣ ಕೀಳೋದಕ್ಕೂ ಸರ್ಕಾರಗಳು ಮುಂದಾಗ್ತವೆ. ಅಭಿವೃದ್ಧಿ ಹೆಸರಲ್ಲಿ ನೈಜ ಸೌಂದರ್ಯವನ್ನೇ ಕಳೆದುಕೊಂಡು ಸೊರಗುತ್ತಿರುವ ಅದೆಷ್ಟೋ ಪ್ರವಾಸಿ ಸ್ಥಳಗಳ ಉದಾಹರಣೆ ನಮ್ಮ ಕಣ್ಮುಂದಿವೆ.

ಇಷ್ಟಕ್ಕೂ ನಮ್ಮ ಮಾಧ್ಯಮಗಳು ಈ ವಿಷಯದಲ್ಲಿ ತುಂಬಾ ಎಡವುತ್ತಿವೆ ಅನ್ನಿಸ್ತಿದೆಯಾ.? ಜನರಿಗೆ ಸಹಾಯ ಮಾಡುತ್ತೇವೆ ಅಂತಾ ಹೇಳ್ತಾ ಅವರಿಗೆ ಗೊತ್ತಿಲ್ಲದಂತೆ ಪರಿಸರವನ್ನು ಹಾಳುಮಾಡುತ್ತಿವೆಯಾ.? ಅಭಿವೃದ್ಧಿ ಪತ್ರಿಕೋದ್ಯಮ ಅನ್ನೋದನ್ನ ತಪ್ಪಾಗಿ ಗೃಹಿಸಿದ್ದರಿಂದಲೇ ಇಷ್ಟೆಲ್ಲಾ ಆಗುತ್ತಿವೆಯಾ.? ಜನರೂ ಕೂಡ ಸೋಮಾರಿಗಳಾಗ್ತಾ, ಹುರುಪು ಕಳೆದುಕೊಳ್ತಾ, ಇಂತಹ ಸೌಲಭ್ಯಗಳೆಲ್ಲಾ ಬೇಕು ಅಂತಾ ಅಪೇಕ್ಷೆ ಪಡ್ತಿದ್ದಾರಾ.? ದಯವಿಟ್ಟು ಗೊತ್ತಾದವರು ಹೇಳಿ...

ಕೊನೆಹನಿ ಎಲ್ಲರೂ ಹಿಮಾಲಯದೆತ್ತರದಲ್ಲಿ ನಿಂತು ಸುಂದರ ದೃಶ್ಯವನ್ನು ನೋಡ್ಬೇಕು ಅಂತಾ ಹಿಮಾಲಯಕ್ಕೆ ಮೆಟ್ಟಿಲು ಅಥವಾ ಟ್ರ್ಯಾಲಿ ವ್ಯವಸ್ಥೆ ಮಾಡೋದಕ್ಕೆ ಸಾಧ್ಯಾನಾ ?

Tuesday, February 1, 2011

ನಾವು ಪತ್ರಕರ್ತರು, ನಮ್ಮ ಲೈಫು ಇಷ್ಟೇನೆ.....!!!

- ಅಶ್ವತ್ಥ ಕೋಡಗದ್ದೆ
ಬೆಳಗಿನ ಜಾವ ಸುಮಾರು 5 ಗಂಟೆ. ಖುರ್ಚಿಯ ಮೇಲೆ ಕುಳಿತರೂ ಕುಳಿತ ಹಾಗಲ್ಲ. ಏನೋ ಚಡಪಡಿಕೆ, ಮತ್ತೆನನ್ನೋ ಕಳೆದುಕೊಂಡಂತೆ. ಮೊದಲೇ ನೈಟ್ ಶಿಫ್ಟ್ ಅಂತಾ ಅಸಹನೆ ಬೇರೆ. ಅಂತಹುದರಲ್ಲಿ ಹೀಗಾಗಿಬಿಟ್ರೆ ಅದೆಷ್ಟು ಸಿಟ್ಟು ಬರಬೇಡ ಹೇಳಿ. ನಿನ್ನೆಯಂತೂ ಹಾಗಾಯ್ತು. ಇವತ್ತಾದ್ರೂ ಸಿಗುತ್ತಾ ಅಂದ್ರೆ ಅದೂ ಇಲ್ಲ. ಅಷ್ಟಕ್ಕೂ ನಾನು ಬಯಸ್ತಿರೋದು ಏನನ್ನಾ.? ನಾನೇನು ಕೋಟಿ ಕೋಟಿ ರೂಪಾಯಿ ಬೇಕು ಅಂತಿದೀನಾ? ಹಾಗೇನಿಲ್ವಲ್ಲ... ಆಪ್ಟರಾಲ್ ಒಂದು ಆಕ್ಸಿಡೆಂಟ್, ಮೂರು ಜನರ ಸಾವು. ಆಟ್ಲೀಸ್ಟ್ ಒಂದು ಕೊಲೆ. ಅದೂ ಆಗ್ಲಿಲ್ಲಾ ಅಂದ್ರೆ ಬೆಳಗಿನ ನ್ಯೂಸ್ ಗೆ ಫಸ್ಟ್ ಹೆಡ್ ಲೈನ್ ಮಾಡ್ಕೊಳ್ಳೋದಾದ್ರೂ ಹೇಗೆ. ಎಲ್ಲಾ ಹಳಸಲು ಸುದ್ದಿ. ಅದೇ ರಾಜಕಾರಣಿಗಳು ನಿನ್ನೆ ಎರಚಿಕೊಂಡ ಕೆಸರು, ಮಂತ್ರಿಗಳು ನೀಡಿದ ಸುಳ್ಳು ಭರವಸೆ. ಅದಕ್ಕೆಲ್ಲಾ ಯಾರಾದ್ರೂ ಸುದ್ದಿ ಅಂತಾರಾ.....

ಹೌದು... ಇದು ನನ್ನೊಬ್ಬನ ಆಲೋಚನಯಾಗ್ಲೀ, ಮಾತಾಗ್ಲೀ  ಅಲ್ಲಾ... ನನ್ನಂತ ಅದೆಷ್ಟೋ ಪತ್ರಕರ್ತರು ಹೀಗೇ ಆಲೋಚನೆ ಮಾಡ್ತಾರೆ ಅಂದ್ರೆ ವೀಕ್ಷಕರಿಗೆ ಆಶ್ಚರ್ಯ ಆದ್ರೆ ಅದು ಅವರ ತಪ್ಪಲ್ಲ. ಸುದ್ದಿಮನೆಗಳಲ್ಲಿ ಇವತ್ತು ಇರೋ ವಸ್ತುಸ್ಥಿತಿನೇ ಅಂತಾದ್ದು. ರಾತ್ರಿ ಮೂರು ಜನಾನಾದ್ರೂ ಸತ್ತಿಲ್ಲ ಅಂದ್ರೆ ಬೆಳಗ್ಗೆ ಸುದ್ದಿನೇ ಇಲ್ಲ ಎಂಬಂತೆ. ಅದ್ರಲ್ಲೂ  ಟಿವಿ ಚಾನೆಲ್ ಗಳಲ್ಲಿ ಈ ಗೊಣಗಾಟ ವಿಪರೀತ. ಇವತ್ತೇನ್ರಿ ಯಾರೂ ಸತ್ತೂ ಇಲ್ಲ ಅನ್ನೋ ಅಸಹನೆ ಬೇರೆ. ಎಲ್ಲೋ ಒಂದು ಕೊಲೆ ನಡೀತು ಅಂದ್ರೆ ಅಬ್ಬಾ ಫಸ್ಟ್ ಹೆಡ್ ಲೈನ್ ಗೆ ಸುದ್ದಿ ಆಯ್ತಲ್ಲಾ ಅನ್ನೋ ಖುಷಿ. ಪಾಪ ಇದು ಪತ್ರಕರ್ತರ ತಪ್ಪಲ್ಲ. ಈ ತಪ್ಪಿಗೆ ನೀವು ಅವರನ್ನಾ ಹೊಣೆಗಾರರನ್ನಾಗಿಸಬೇಡಿ. 24 ಗಂಟೆ ಸುದ್ದಿ ಕೊಡ್ಬೇಕು ಅನ್ನೋ ಕರ್ಮದಲ್ಲಿ ಬಿದ್ದಿರೋ ಅವರಾದ್ರೂ ಏನು ಮಾಡ್ತಾರೆ ಹೇಳಿ.
ನಾಲ್ಕೂವರೆ ವರ್ಷದ ಹಿಂದೆ ನಾನು ಈಟಿವಿಯ ಹೈದರಾಬಾದ್ ಆಫೀಸ್ ನಲ್ಲಿ ಕುಳಿತು ಮೊದಲ ದಿನ ನೈಟ್ ಶಿಫ್ಟ್ ಮಾಡಿ ಬೆಳಗಿನ ಜಾವ ಆಗ್ತಿದ್ದಂತೆ ನನ್ನ ಸೀನಿಯರ್ ಬಾಯಿಂದ ಈ ಮಾತುಗಳನ್ನಾ ಕೇಳಿ ಕಂಗಾಲಾಗಿಬಿಟ್ಟಿದ್ದೆ. ಒಬ್ಬರೇ ಸತ್ತಿದ್ದಾ? ಸ್ಕ್ರಾಲ್ ಗೆ ಹಾಕ್ಬಿಡಿ, (ಟಿವಿಯಲ್ಲಿ ಕೆಳಭಾಗದಲ್ಲಿ ಅಕ್ಷರ ರೂಪದಲ್ಲಿ ಚಿಕ್ಕದಾಗಿ ಸುದ್ದಿ ಹೋಗುತ್ತಿರುವುದಕ್ಕೆ ಸ್ಕ್ರಾಲ್ ಅಂತಾರೆ. ಕಾಂಜಿಪಿಂಜಿ ಸುದ್ಧಿಗಳಿಗೆ ಮಾತ್ರ ಅಲ್ಲಿ  ಅವಕಾಶ) ಓ ನಾಲ್ಕು ಜನ ಸತ್ತಿದ್ದಾರಾ ಬೇಗನೇ ಬ್ರೇಕಿಂಗ್ ಕೊಡಿ. (ದೊಡ್ಡ ದೊಡ್ಡ ಅಕ್ಷರದಲ್ಲಿ ಟಿವಿ ಸ್ಕ್ರೀನ್ ತುಂಬ ಗ್ರಾಫಿಕ್ಸ್ ಬರುವುದು) ಬೇರೆ ಚಾನೆಲ್ ಗಿಂತ ಮುಂಚೆ ನಾವೇ ಕೊಡ್ಬೇಕು ಅನ್ನೋ ಮಾತುಗಳನ್ನ ಕೇಳಿದಾಗ ಆಶ್ಚರ್ಯ ಆಗ್ತಿತ್ತು. (ಪತ್ರಕರ್ತರಾದ ನಾವು ಸಾವಿಗೆ ಬೆಲೆ ಕಟ್ಟೋದು ಹೇಗೆ ಅಂತಾ ನಾನು  ಕಲಿತುಕೊಂಡದ್ದು ಹಾಗೆ. )

ಇದೇನು ಯಾರಾದ್ರೂ ಸಾಯಲಿ ಅಂತಾ ಇಷ್ಟು ಸಲೀಸಾಗಿ ಹೇಳ್ತಾರಲ್ಲಾ ಅಂತಾ ಆಶ್ಚರ್ಯ ಆಗ್ಬಿಟ್ಟಿದ್ದೆ. ಜೀವದ ಬೆಲೆ ಇವರಿಗೆ ಗೊತ್ತಿಲ್ವಾ. ಅದೂ ಆಕ್ಸಿಡೆಂಟ್, ಕೊಲೆಯಾಗಿ ಸಾಯಲಿ ಅಂದರೆ ಏನು ಕಥೆ. ಯಾವುದೋ ಫ್ಯಾಕ್ಟರಿಗೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಭೂದಿ ಆಗ್ಲಿ ಅನ್ನೋದಕ್ಕೆ ಹೇಗೆ ಇವರಿಗೆ ಮನಸ್ಸು ಬರುತ್ತೆ ಅಂತಾ ಆವತ್ತು ತುಂಬಾ ಆಲೋಚನೆ ಮಾಡಿದ್ದೆ. ಇವರಿಗೇನು ಸಂವೇದನೆಗಳೇ ಇಲ್ವಾ ಅಂತಾ ನನ್ನನ್ನು ನಾನೇ ಪ್ರಶ್ನಿಸಿಕೊಂಡಿದ್ದೆ.
ನಾಲ್ಕು ತಿಂಗಳು ಅಷ್ಟೇ ಅದೆಲ್ಲಾ ರೂಡಿಯಾಗ್ಬಿಟ್ಟಿತ್ತು. ಜಗತ್ತಲ್ಲಿ ಅನಾಹುತಗಳಾಗದಿದ್ರೆ ಸುದ್ದಿ ಇಲ್ಲ ಅನ್ನೋದು ಗೊತ್ತಾಗೋದಕ್ಕೆ ಪ್ರಾರಂಭವಾಯ್ತು. ವರ್ಷದ ಬಳಿಕ ನಾನೂ ಹಾಗೇ ಗೊಣಗುವುದನ್ನಾ, ಬಳಿಕ ಅಸಹನೆಯಿಂದ ಹೊರಳಾಡೋದನ್ನಾ ಕಲಿತುಬಿಟ್ಟು. ಇವತ್ತಿಗೂ ಅದನ್ನ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದೇನೆ. ಹೈದರಾಬಾದ್ ನಿಂದ ಈಟಿವಿ ಬಿಟ್ಟು ಬೆಂಗಳೂರಿಗೆ ಬಂದೆ. ಆದ್ರೆ ನನ್ನ ಆ ಗೊಣಗಾಟವನ್ನ ಸ್ವಲ್ಪನೂ ಕಡಿಮೆ ಮಾಡಿಲ್ಲ.ಸ್ವಲ್ಪ ಜಾಸ್ತಿನೇ ಆಗಿದೆ ಅನ್ನಬಹುದೆನೋ. ಯಾಕೆಂದ್ರೆ ನಾನು ಬಂದಿದ್ದು 24 hours news channel ಗೆ. 24 ಗಂಟೆ ಸುದ್ದಿ ಕೊಡ್ಲೇ ಬೇಕಲ್ಲ. ನಮ್ಮ ನೈಟ್ ಬೀಟ್  ಕ್ರೈಂ ರಿಪೋರ್ಟರ್ ಹತ್ರಾ ದಿನವೂ ಕೇಳೋದು.. ಏನೂ ಕ್ರೈಂ ಇಲ್ವಾ ಸಾರ್ ಅಂತಾ... ಅವರೇನಾದ್ರೂ ಇದೆ ಅಂದ್ರೆ ಇಬ್ಬರಿಗೂ ಖುಷಿ.. ಕೆಲವೊಮ್ಮೆ ಅವರೂ ಹೇಳೋದು ಹಾಗೆ ಇರುತ್ತೆ. ಏನ್ ಸಾರ್ ಈ ವಾರದಲ್ಲಿ ನೈಟ್ ಒಂದು ಮರ್ಡರ್ ಆಗಿದ್ದು ಬಿಟ್ರೆ ಏನೇನೂ ಇಲ್ಲಾ ಸಾರ್... ನೈಟ್ ಸುದ್ದಿನೇ ಇಲ್ಲಾ. ಸಖತ್ ಬೋರ್ ಆಗ್ಬಿಟ್ಟಿದೆ.. ಇದಕ್ಕೆ ಏನಂತೀರಿ ?
ಅಂದು ಬೇರೆಯವರನ್ನ ನೋಡಿ ಇವರಿಗೇನು ಸಂವೇದನೆಗಳಿಲ್ವಾ ಅಂತಾ ನಾನು ಪ್ರಶ್ನಿಸ್ತಿದ್ದೆ. ಇವತ್ತು ನನ್ನನ್ನು ನಾನು ಪ್ರಶ್ನಿಸಿಕೊಳ್ತಾ ಇದ್ದೇನೆ. ನಾನು ಸಂವೇದನೆಗಳನ್ನಾ ಉಳಿಸಿಕೊಂಡಿದ್ದೇನಾ. ಮನಸ್ಸು ಅನ್ನೋದು ಸತ್ತು ಹೋಗ್ಬಿಟ್ಟಿದೆಯಾ. ? ಹೀಗೆ ಮುಂದುವರಿದ್ರೆ ಮುಂದೊಂದು ದಿನ ಸಂವೇದನೆ, ಸಂಬಂಧ ಅನ್ನೋ ಶಬ್ದವೇ ನಮ್ಮಂತಾ ಪತ್ರಕರ್ತರಿಂದಾ ರೆಯಾಗಿ ಬಿಡುತ್ತಾ? ಡಿಕ್ಷ್ನೆರಿಗಳನ್ನ ಹಿಡ್ಕೊಂಡು ಅದರ ಅರ್ಥ ಹುಡುಕಬೇಕಾಗುತ್ತಾ? ಹಾಗೆ ಆದ್ರೂ ಆಶ್ಚರ್ಯ ಇಲ್ಲಾ ಅನ್ಸತ್ತೆ ಅಲ್ವಾ….!?  
ಟಿಆರ್ ಪಿ ಅನ್ನೋ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿರೋ ನಮ್ಮಲ್ಲಿ ಈ ಸಂವೇದನೆಗಳಿಗೆಲ್ಲಾ ಮೊಳೆತು ಗಿಡವಾಗಿ ಹೂವು ಬಿಡೋದು ಕಷ್ಟ ಅನ್ಸಿಬಿಟ್ಟಿದೆ.

Monday, January 17, 2011

ಜ್ಞಾನ-ವಿಜ್ಞಾನ

ಕಿವುಡರಲ್ಲಿ ಮೂಡಿತು ಆಶಾಭಾವನೆ.....!?

-ಸುಭಾಸ್ ಧೂಪದಹೊಂಡ
ನಮಗೆ ಕಿವಿ ಇಲ್ಲದಿದ್ರೆ ಏನಾಗ್ತಿತ್ತು. ಒಂದು ಕ್ಷಣ ಯೋಚಿಸಿ.. ಈ ಜಗತ್ತಿನಲ್ಲಿ ಮಾನವರ ಸಂವಹನ ಇಷ್ಟು ಬೆಳೆಯಲು ಸಾಧ್ಯವೇ ಇರಲಿಲ್ಲ ಅಲ್ವಾ...? ನಿಮ್ಮ ಕಲ್ಪನೆ ತಪ್ಪು. ಯಾಕೆಂದ್ರೆ ಮಾನವ ಕಿವಿ ಇಲ್ಲದೆನೂ ಕೇಳಬಹುದು.!!!

ಹೌದು ಈ ವಿಷಯ ತೀರ ಇತ್ತೀಚೆಗೆ ಸಾಭೀತಾಗಿದೆ. ಈ ಸಂಶೋಧನೆಯನ್ನ  ಅಮೆರಿಕಾ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಆದರೆ ಅದಲ್ಲ ವಿಶೇಷ. ಈ ವಿಷಯವನ್ನು ಆಧರಿಸಿ ಮಂಗಳೂರು ಮೂಲದ ವಿಜ್ಞಾನಿ ನಾರಾಯಣ ಕರ್ಕೆರಾ ಎಂಬುವವರು ಕಿವುಡರಿಗೆ ಅನುಕೂಲವಾಗಬಲ್ಲ ಒಂದು ಯಂತ್ರ ಕಂಡುಹಿಡಿದಿದ್ದಾರೆ.

ಇತರ ಪ್ರಾಣಿಗಳಂತೆ ಮಾನವನ ಚರ್ಮ ಸಹ ಸಂವಹನವನ್ನ ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಆದರೆ ಅದನ್ನ ಸೂಕ್ಷ್ಮವಾಗಿ ಬಳಸದ ಕಾರಣ ಸಂವಹನದ ಮೂಲಕ ನಮ್ಮ ಮೆದುಳಿಗೆ ಸಂಜ್ಞೆ ಮುಟ್ಟಿಸುವ ಚರ್ಮದ ಇನ್ನೊಂದು ಕಾರ್ಯ ಮಾನವನ ವಿಕಾಸದ ಹಂತದಲ್ಲಿ ನಿಷ್ಕ್ರಿಯವಾಗಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.
 ನಮ್ಮ ಮೆದುಳಿನಲ್ಲಿ ಶಬ್ದವನ್ನ ಗ್ರಹಿಸುವ ಮತ್ತು ಅರ್ಥೈಸುವ ವಿಭಾಗಕ್ಕೆ ನರಗಳ ಸಹಾಯದಿಂದ ಸುದ್ದಿ ಮುಟ್ಟಿಸುವುದು ಕಿವಿಯ ಕೆಲಸ. ನಮ್ಮ ಸುತ್ತ ಉತ್ಪತ್ತಿಯಾಗುವ ಶಬ್ದಗಳು ನಮ್ಮ ಕರ್ಣಪಟಲಕ್ಕೆ ಹೋಗಿ ಬಡಿಯುತ್ತದೆ. ಕಣ್ಣ ಪಟಲದಲ್ಲಿ ಉಂಟಾದ ಕಂಪನ ನರಗಳ ಮೂಲಕ ಮಿದುಳಿಗೆ ರವಾನೆಯಾಗಿ ಅಲ್ಲಿ ಶಬ್ದದ ಗ್ರಹಿಕೆಯಾಗುತ್ತದೆ.
ಈ ಕಿವಿಯಲ್ಲಿರುವ  ಪಟಲ ಅಥವಾ ಮಿದುಳಿನೊಂದಿಗೆ ಸಂಪರ್ಕ ಕಲ್ಪಿಸುವ ನರಗಳ ದೌರ್ಬಲ್ಯದಿಂದ ಕೆಲವರಿಗೆ ಕಿವಿ ಕೇಳಿಸದು. ಆದರೆ ಇನ್ನ ಕಿವುಡುತನ ಸಮಸ್ಯೆ ತಪ್ಪಲಿದೆ.
ಚರ್ಮದ ಮೂಲಕ ನಮ್ಮ ಸುತ್ತ ಉಂಟಾಗುವ ಕಂಪನವನ್ನು ನಾವು ಗ್ರಹಿಸಿ ಶಬ್ದಗಳನ್ನುಕೇಳಬಹುದು. ಈ ಹೊಸ ಸಂಶೋಧನೆಯಿಂದ ಸಂಪರ್ಕ ತಂತ್ರಜ್ಞಾನದಲ್ಲಿ  ಭಾರೀ ಬದಲಾವಣೆ ಆಗಲಿದೆ.

ನಮ್ಮವರ ಸಾಧನೆ
ಈ ತಂತ್ರಜ್ಞಾನ ಆಧರಿಸಿ ಮಂಗಳೂರು ಮೂಲದ ಅಣು ವಿಜ್ಞಾನಿ ನಾರಾಯಣ ಕರ್ಕೆರಾ ಆಶಾ ಬಾಡಿ ಪೋನ್ ಎಂಬ ಹೊಸ ಚಿಕ್ಕ ಯಂತ್ರವೊಂದನ್ನ ಕಂಡುಹಿಡಿದಿದ್ದಾರೆ. ಇದ್ನ ನಿಮ್ಮ ದೇಹದ ಯಾವುದೇ ಭಾಗದ ಚರ್ಮಕ್ಕೆ ತಾಗಿಸಿ ಹಿಡಿದರೆ ನೀವು ಕಿವಿಯಲ್ಲಿ ಕೇಳುವುದಕ್ಕಿಂತ ಸ್ಪಷ್ಟವಾಗಿ ಕೇಳಬಲ್ಲಿರಿ. ಈ ಸಾಧನ ಕಿವುಡರಿಗೆ ಆಶಾಕಿರಣವಾಗಿದೆ.


ಮುಂಬೈನ ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್ ನಲ್ಲಿ ಅಣುವಿಜ್ಞಾನಿಯಾಗಿ ಸೇವೆ ಸಲ್ಲಿಸಿದ ನಾರಾಯಣ ಕರ್ಕೆರಾ ಈಗ ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸ ಯಂತ್ರಕ್ಕೆ ಪೇಟೆಂಟ್ ಸಹ ಪಡೆಯಲು ನಿರ್ಧರಿಸಿದ್ದಾರೆ. ಈ ಸಾಧನವನ್ನು ಸಧ್ಯ ಅಗತ್ಯವಿದ್ದವರಿಗೆ 15 ರಿಂದ 20 ಸಾವಿರಕ್ಕೆ ಮಾಡಿಕೊಡುತ್ತಿದ್ದಾರೆ. ಇದು ಕಿವುಡರಿಗೆ ಆಶಾಕಿರಣವಾಬೇಕಿದ್ದರೆ ಸರ್ಕಾರ ಪ್ರೋತ್ಸಾಹ ನೀಡ್ಬೇಕು. ಕಂಪೆನಿಗಳು ಹಣಕಾಸಿನ ನೆರವು ಕೊಡ್ಬೇಕು ಅನ್ನೋದು ನಾರಾಯಣ ಕರ್ಕೆರಾ ಅವರ ಮನವಿ. ಮನವಿಗೆ ಸ್ಪಂದನೆ ಸಿಗುತ್ತಾ ?

Wednesday, December 22, 2010

ಈ ಧೈರ್ಯಕ್ಕೇ ಅದೇ ಕಾರಣವಾ...!?

 - ಅಶ್ವತ್ಥ ಕೋಡಗದ್ದೆ
ಹಾಯತ್ ನಗರದ ಬಸ್ ಸ್ಟ್ಯಾಂಡಿನಲ್ಲಿ ರಾತ್ರಿ 11 ಗಂಟೆಗೆ ಹೊತ್ತಿಗೆ ಏನು ಮಾಡೋದು ಅಂತಾ ಗೊತ್ತಾಗದೇ ನಿಂತಾಗ ನನಗೆ ಮೊದಲು ನೆನಪಾಗಿದ್ದು ಅಮ್ಮಾ, ಅಪ್ಪಯ್ಯಾ ನಾನು ಮನೆಲ್ಲೇ ಶಾಲೆಗೆ ಹೋಗ್ತಿ. ಉಂಚಳ್ಳಿಗೆ ಹೋಗ್ತಿಲ್ಲೆ ಅಂತಾ ನಾನು ಅತ್ತಿದ್ದು ಮತ್ತು ನನ್ನ ದೊಡ್ಡಪ್ಪ ಏನು ಮಾಡಿದ್ರೂ ಬಿಡದೇ ಸೈಕಲ್ ಮೇಲೆ ಕೂಡಿಸಿಕೊಂಡು ಕರೆದುಕೊಂಡು ಹೋಗಿದ್ದು.
ಹೌದು, ಒಂದನೇ ತರಗತಿ ಮುಗಿದಿತ್ತು. ಏಪ್ರಿಲ್-ಮೇ ರಜೆ ಎರಡು ತಿಂಗಳು ಉಂಡಾಡಿ ಗುಂಡನಾಗಿ ಕಳೆದಿದ್ದೆ. ಅಲ್ಲಿ ಇಲ್ಲಿ ನೆಂಟರ ಮನೆ ಸುತ್ತಿದ್ದು, ಚಾಲಿ ಕಣದಲ್ಲಿ ಓರಗೆಯವರ ಜೊತೆ ಆಡಿದ್ದು ಇದಿಷ್ಟರಲ್ಲೇ ಕಳೆದಿತ್ತು. ಎರಡನೇ ತರಗತಿ ಆರಂಭವಾಗಿ ಇನ್ನೂ ಒಂದು ವಾರ ಆಗಿರಲಿಲ್ಲ. ಸಂಜೆ ಶಾಲೆ ಬಿಟ್ಟು ಬಂದು ಆಡುತ್ತಿದ್ದವನಿಗೆ ಮನೆಯಿಂದ ಬುಲಾವ್ ಬಂದಿತ್ತು. ಏಕೆ ಸಂಜೆ ಆಗೋದ್ರೊಳಗೇ ಕರೀತಿದಾರೆ ಅಂತಾ ಹೋಗಿ ನೋಡಿದ್ರೆ ಮನೆ ಎದುರು ದೊಡ್ಡಪ್ಪನ ಸೈಕಲ್  ನಿಂತಿತ್ತು. ಮೊದಲೇ ನನಗೆ ದೊಡ್ಡಪ್ಪ ಅಂದ್ರೆ ಹಾವಿಗೆ ಬೇರು ತೋರಿಸಿದಂತೆ. ಭರ್ತಿ ಹೆದರಿಕೆ.
ಶಿರಸಿಯಿಂದ ಬನವಾಸಿ ಹೋಗುವಾಗ ಸಿಗುವ ಉಂಚಳ್ಳಿಯಲ್ಲಿ ಅವಾ ಪೋಸ್ಟ್ ಮಾಸ್ತರ್ ಕಮ್ ಪೋಸ್ಟ್ ಮೆನ್. ಅವಾ  ಮೂಲಮನೆ ಕೋಡಗದ್ದೆಗೆ ಬರೋದು 15 ದಿನಕ್ಕೋ ತಿಂಗಳಿಗೂ ಒಮ್ಮೊಮ್ಮೆ. ಅವಾ ಬಂದಾ ಅಂದ್ರೆ ನನ್ನ ಪುಂಗಿಯೆಲ್ಲಾ ಬಂದಾಗಿ ಬಿಡುತ್ತಿತ್ತು. ಉಳಿದ ದಿನಾ ಭರ್ಜರಿ ಕೇಕೆ ಹೊಡೆಯುತ್ತಿದ್ದ ನಾನು ಅಂದು ಇದ್ದೇನೋ ಇಲ್ಲವೋ ಅನ್ನುವಷ್ಟು ಗಪ್ ಚುಪ್. ಸರಿ, ಮನೆಯ ಒಳಗೆ ಹೋಗಿ ನೋಡ್ತೇನೆ ಒಂದೂ ಅರ್ಥಾ ಆಗ್ತಿಲ್ಲ. ನನ್ನ ಬಟ್ಟೆ ಬರೆಯನ್ನೆಲ್ಲಾ ಅಮ್ಮಾ ಬ್ಯಾಗ್ ಗೆ ತುಂಬ್ತಾ ಇದ್ಳು. ಅಪ್ಪಯ್ಯ ಅಲ್ಲಲ್ಲಿ ಹರಡಿಕೊಂಡಿದ್ದ ಪಾಟಿ ಪುಸ್ತಕಗಳನ್ನಾ ಚೀಲಕ್ಕೆ ಹಾಕ್ತಿದ್ದ.
ತಮ್ಮಾ ನೀನು ಶಾಲೆಗೆ ಹೋಪಲೆ ಉಂಚಳ್ಳಿಯಲ್ಲಿ ಇರು. ಅಪ್ಪಪ್ಪಾ ಕರಕೊಂಡು ಹೋಗ್ತಾ. ಹೋಗಿ ಕಾಲು-ಕೈ ತೊಳ್ಕಂಡು ಅಲ್ಲಿದ್ದಿದ್ದು ಅಂಗಿ-ಚಡ್ಡಿ ಹಾಕ್ಯ ಅಂದ್ಲು ಅಮ್ಮಾ. ನಾನು ದೊಡ್ಡದಾಗಿ ಅಳಲು ಶುರುಮಾಡಿಬಿಟ್ಟೆ... ಅಮ್ಮಾ, ಅಪ್ಪಯ್ಯಾ ನಾನು ಶಾಲೆಗೆ ಮನಿಂದನೇ ಹೋಗ್ತಿ. ಉಂಚಳ್ಳಿಗೆ ಹೋಗ್ತ್ನಿಲ್ಲೆ ಹೇಳಿ. ಹೊರಗೆಲ್ಲೋ ಇದ್ದ ದೊಡ್ಡಪ್ಪ ಬಂದವನೇ ಒಂದು ಸಲ ಕಣ್ಣು ಬಿಟ್ಟ ನೋಡಿ ನಾನು ಸುಮ್ಮನೇ ಹೋಗಿ ಕಾಲು-ಕೈ ತೊಳೆದು ಕೊಂಡು ಬಂದು ಸೈಕಲ್ ಹತ್ತಿ ಕುಳಿತಿದ್ದೆ. ಹಾಗೆ ಉಂಚಳ್ಳಿಗೆ ಹೊರಟಿತ್ತು ನನ್ನ ಸವಾರಿ. ಆದರೆ ಸೈಕಲ್ ನಲ್ಲಿ ಹಿಂದೆ ಕ್ಯಾರಿಯರ್ ಮೇಲೆ ಕುಳಿತ ನಾನು ದಾರಿಯುದ್ದಕ್ಕೂ ಅಳ್ತಾನೇ ಇದ್ದೆ. ಅಲ್ಲಿ ನಾನು 5 ವರ್ಷ ಶಾಲೆಗೆ ಹೋಗಿದ್ದು, ಹೊಡೆತ ತಿಂದಿದ್ದು, ಪತ್ರಗಳನ್ನು ಹಂಚಿದ್ದು, ಬಗೆಬಗೆಯ ಗೆಳೆಯರನ್ನು ಸಂಪಾದಿಸಿದ್ದು ಇವೆ ದೊಡ್ಡ ಕಥೆಯಾಗುತ್ತೇನೋ.
ಆದರೆ ಅಲ್ಲಿ ಇರುವಷ್ಟು ವರ್ಷ ಅದೆಷ್ಟು ಕಷ್ಟಪಟ್ಟೆನೋ, ಸುಖ ಪಟ್ಟೆನೋ ಅದನ್ನೆಲ್ಲ ಅತ್ತೊಟ್ಟಿಗಿಟ್ಟು ನೋಡಿದರೆ ನಾನು ಒಂದು ವಿಷಯವನ್ನಂತೂ ಕಲಿತಿದ್ದೆ. ಅದೇ ಧೈರ್ಯ... ಯಾವ ಊರಿನಲ್ಲಿ ಒಬ್ಬನನ್ನೇ ಕರೆದುಕೊಂಡು ಹೋಗಿ ಬಿಟ್ಟರೂ ಬದುಕಬಲ್ಲೆ ಅನ್ನೋ ವಿಶ್ವಾಸ ಮೂಡಿದ್ದು ಅಲ್ಲೇ. ಎರಡನೇ ತರಗತಿ ವೇಳೆಗೆ ಒಬ್ಬನೇ ಅಲ್ಲಿಂದ ಶಿರಸಿಗೆ ಹೋಗಿ ಮನೆಗೆ ಬೇಕಾದ ಸಣ್ಣಪುಟ್ಟ ಸಾಮಾನು ತರುವಷ್ಟು ಧೈರ್ಯ ನನ್ನಲ್ಲಿ ಮೂಡಿಬಿಟ್ಟಿತ್ತು. ಹಾಗೆ ಶಿರಸಿಗೆ ಹೋಗುವಾಗಲೆಲ್ಲ ಉಂಚಳ್ಳಿಯಿಂದ ನಾನು ಬಸ್ಸಿಗೆ ಹೋದದ್ದಕ್ಕಿಂತ ಹಾಲಿನ ವ್ಯಾನಿಗೆ ಹೋಗಿದ್ದೇ ಹೆಚ್ಚು. ಸುಮಾರು 15 ಕಿಲೋಮೀಟರ್ ದೂರದ ಶಿರಸಿಗೆ ಕೇವಲ 2 ರೂಪಾಯಿ ಕೊಟ್ರೆ ಆಯ್ತು. ಪೋಸ್ಟ್ ಮಾಸ್ತರ್ ಮನೆ ಮಾಣಿ ಅನ್ನೋ ಕಾರಣಕ್ಕೆ ವ್ಯಾನಿನಲ್ಲಿ ಮುಂದೆ ಕುಳ್ಳಿರಿಸಿಕೊಂಡು ಹೋಗ್ತಿದ್ರು. ಮಾರಿಗುಡಿಗಿಂತ ಸ್ವಲ್ಪ ಹಿಂದೆ ಇಳಿಸ್ತಿದ್ರು. ಎನೇನು ಬೇಕೋ ಅದನ್ನೆಲ್ಲಾ ತಗಂಡು ಬರ್ತಿದ್ದೆ. ಪೇಟೆಯಲ್ಲಿ ಓಡಾಡೋದೇನು ಮಹಾ ಕಷ್ಟ ಅಲ್ಲಾ ಅಂತಾ ಗೊತ್ತಾದದ್ದೂ ನನಗೆ ಅವಾಗಲೇ.
ಡಿಗ್ರಿ ಮುಗಿದು, ಈಟಿವಿಯಲ್ಲಿ ಕೆಲಸ ಅಂತಾ ಸಿಕ್ಕು ಹೈದರಾಬಾದ್ ಗೆ ಹೋಗಬೇಕಾಗಿ ಬಂದಾಗ ನಮ್ಮನೆಯಲ್ಲಿ ಉಳಿದವರೆಗೆ ಸ್ವಲ್ಪ ಹೆದರಿಕೆ ಇತ್ತು. ಒಬ್ಬನೇ ಹೋಗೋದು, ಅಲ್ಲಿ ಉಳಿಯುವುದಕ್ಕೆ ಹೇಗೋ, ಅಲ್ಲಿನ ಭಾಷೆ ಬೇರೆ ಬರೋಲ್ಲ, ಪರಿಚಯದವರು ಬಹಳ ಇಲ್ಲ ಅಂತಾ. ಮೊದಲಿಂದನೂ ಜರ್ನಲಿಸಂ ಅಂದ್ರೆ ಕಣ್ಣರಳಿಸುತ್ತಿದ್ದ ನಾನು ಈಟಿವಿ ಅಂದ್ರೆ  ಬಿಟ್ಕೊಳ್ತೇನ್ಯೆ. ದಿನಾ ಮನೆಲ್ಲಿ ಕುಳಿತು ನೋಡುತ್ತಿದ್ದ ಚಾನೆಲ್ ನಲ್ಲಿ ಕೆಲಸ ಅಂದ್ರೆ ಸುಮ್ನೆ ಮಾತಾ ? ಸರಿ ಗಂಟುಮೂಟೆ ಕಟ್ಗೊಂಡು ಹೋಗಿ ಒಂದು ಬೆಳಿಗ್ಗೆ ಹೈದರಾಬಾದ್ ನಲ್ಲಿ ಇಳಿದುಬಿಟ್ಟೆ.
ಹಾಗೂ ಹೀಗೂ ಯಾವುದೋ ದೂರದ ನೆಂಟರ ಪರಿಚಯ ಸಿಕ್ಕಿತ್ತು. ಹೋಗಿ ಲಗೇಜ್ ಇಟ್ಟು ಅಲ್ಲಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿದ್ದ ರಾಮೋಜಿ ಫಿಲ್ಮ್ ಸಿಟಿನಲ್ಲಿ ಇರೋ ಆಫೀಸ್ ನಲ್ಲಿ ಕೆಲಸಕ್ಕೆ ಜೊಯ್ನ್ ಆದೆ. ಹೊಸ ರೂಮು ಹುಡುಕೋ ತನಕಾ ಅಲ್ಲೇ ಹತ್ತಿರದಲ್ಲಿ ಇರೋ ಯು ಕೆ ಗುಡಾ ಎಂಬಲ್ಲಿ ಉಳಿಯೋದಕ್ಕೆ ಅವರೇ ವ್ಯವಸ್ಥೆ ಮಾಡಿದ್ರು. ಆದ್ರೆ ಲಗೇಜ್  ಸಿಟಿನಲ್ಲಿ ಇತ್ತಲ್ಲಾ. ಅದನ್ನೊಂದು ತರ್ಬೇಕು ಅಂತಾ ಹೈದರಾಬಾದ್ ಗೆ ವಾಪಸ್ ಹೋದೆ. ಅಲ್ಲಿಂದ ಲಗೇಜ್ ತಗೊಂಡು ಹೊರಡೋದೇ 7 ಗಂಟೆ ಆಗ್ಬಿಟ್ಟಿತ್ತು. ಯು ಕೆ ಗುಡಾ ಹೋಗ್ಬೇಕು ಅಂದ್ರೆ ಕೋಟಿ ಬಸ್ ಸ್ಟ್ಯಾಂಡ್ ನಲ್ಲಿ ನಿಲ್ಬೇಕು. ಅಲ್ಲಿ 9-30 ಆದ್ರೂ ಬಸ್ ಸಿಗಲೇ ಇಲ್ಲಾ. ಯಾಕೋ ಯಡವಟ್ಟಾಯ್ತು ಅಂತಾ ಅನ್ನಿಸೋಕೆ  ಶುರುವಾಯ್ತು. ಕೈಯಲ್ಲಿ ಒಂದು ಬ್ಯಾಗು, ಸೂಟ್ಕೇಸ್. 5 ಸಾವಿರ ರೂಪಾಯಿ ಬೇರೆ ಇತ್ತು..  
ಯಾರನ್ನೋ ಮಾತಾಡ್ಸಿ ಹಾಗೂ ಹೀಗೂ ಕೋಟಿಯಿಂದ ಹಾಯತ್ ನಗರದ ವರೆಗೆ ಬಸ್ ಹಿಡ್ಕಂಡು ಹೋಗಿ ಮುಟ್ಟಿಕೊಂಡಿದ್ದೆ. ಆಗ್ಲೇ ರಾತ್ರಿ 11 ಗಂಟೆ ಆಗ್ಬಿಟ್ಟಿತ್ತು. ಆದ್ರೆ ಅಲ್ಲಿಂದ ಇನ್ನೂ ಮುಂದು 15 ಕಿಲೋಮೀಟರ್ ಹೋಗ್ಬೇಕಲ್ಲಾ. ಆಟೋ ಮಾಡಿಸಿಕೊಂಡು ಹೋಗಿ ಒಂದು ವೇಳೆ ಕೈಯ್ಯಲ್ಲಿದ್ದಷ್ಟು ದುಡ್ಡು ಕಸ್ಗಂಡು ಕಳಿಸಿಬಿಟ್ರೆ ಅಂತಾ. ಆದ್ರೋ ಹೋಗಿ ಮುಟ್ತೇನೆ ಅನ್ನೋ ಧೈರ್ಯ ಇತ್ತು. ಹೋಗಿ ಮುಟ್ಟಿದೆ ಕೂಡ. ಗೊತ್ತಿಲ್ಲದ ಊರಿನಲ್ಲಿ ನಡು ರಾತ್ರಿಯಲ್ಲಿ ಆ ಧೈರ್ಯ ನನಗೆ ಬಂದದ್ದು ಉಂಚಳ್ಳಿಯಲ್ಲಿ ಇದ್ದಾಗ ಶಿರಸಿಯಲ್ಲಿ ಓಡಾಡಿದ ಅನುಭವದಿಂದ.
ಒಂದೊಮ್ಮೆ ನಾನು ಉಂಚಳ್ಳಿಯಲ್ಲಿ ಶಾಲೆಗೆ ಹೋಗೋದಿಕ್ಕೆ ಇಲ್ದಿದ್ರೆ ಅಷ್ಟು ಧೈರ್ಯ ಬರ್ತಿತ್ತಾ..? ಮನೆಗುಬ್ಬಿಯಾಗಿ ಬಿಡ್ತಿದ್ನಾ..? ಒಬ್ಬನೇ ಹೈದರಾಬಾದ್ ನಲ್ಲಿ ಆ ರಾತ್ರಿ ಯು ಕೆ ಗುಡಾ ಹುಡುಕಿಕೊಂಡು ಹೋಗ್ತಿದ್ನಾ…?’ ಗೊತ್ತಿಲ್ಲ.  ಇವತ್ತೂ ಅದನ್ನೇ ಯೋಚಿಸ್ತಿದ್ದೇನೆ.

Friday, December 17, 2010

ಬಾ ನೀನು ಮತ್ತೊಮ್ಮೆ...!


- ಹರೀಶ್ ಹೆಗಡೆ

ತುಂಬಾ ದಿನಗಳಾಗಿದ್ದವು. ಮಧ್ಯಾಹ್ನದ ಸುಖ ನಿದ್ರೆಯನ್ನು ಅನುಭವಿಸದೇ....  ಆದರೆ ಇಂದು ವೀಕ್ ಎಂಡ್ ನ ಯಾವುದೇ ಪ್ರೋಗ್ರಾಂ ಇಲ್ಲದೇ ಇದ್ದುದರಿಂದ ಮಧ್ಯಾಹ್ನ ಊಟವಾದ ಕೂಡಲೇ ನಿದ್ರಾ ದೇವಿಯ ತೆಕ್ಕೆ ಸೇರಿದೆ. ಎಚ್ಚರವಾದಾಗ ಕತ್ತಲು ಆವರಿಸತೊಡಗಿತ್ತು. ಏನು ಮಾಡಲೂ ಮನಸ್ಸು ಸಹಕರಿಸುತ್ತಿರಲಿಲ್ಲ. ಸುಮ್ಮನೇ ಕಂಪ್ಯೂಟರ್ ಮುಂದೆ ಕುಳಿತು ಪೇಸ್ ಬುಕ್ ಮೇಲೆ ಕಣ್ಣಾಡಿಸತೊಡಗಿದೆ.

Thursday, November 25, 2010

ಆಹಾ ಎಂಥಾ ಟ್ಯಾಲೆಂಟ್...!
ಹೀಗೆ ಫೇಸ್ ಬುಕ್ ನಲ್ಲಿ ಏನನ್ನೂ ತಡಕಾಡ್ತಿದ್ದಾಗ ಒಂದು ವಿಡಿಯೋ ಗಮನ ಸೆಳಿತು... ನೋಡ್ತಾ ಹೋದಂತೆ ಶಿರಸಿ ಬಸ್ ಸ್ಟ್ಯಾಂಡ್ ನಲ್ಲಿ ಬಸ್ ಕಾಯುತ್ತಿದ್ದ ದಿನಗಳು ನೆನಪಾದವು......
video

Saturday, November 20, 2010

ಗೆಸ್ಟ್ ಕಾಲಂ

ಅದು ನಮ್ಮದೇ ಲೋಕ...
- ರೂಪಾ ಹೆಗಡೆ

ಹುಡುಗೀರ ಹಾಸ್ಟೇಲ್ ಅಂದ್ರೆ ಏನೋ ವಿಶೇಷ ಇರತ್ತೆ ಅಂತಾ ಇಣಿಕಿ ನೋಡೋರೇ ಹೆಚ್ಚು. ಅವರು ಅಂದು ಕೊಳ್ಳೋದ್ರಲ್ಲಿ ತಪ್ಪಿಲ್ಲ. ಅಲ್ಲಿ ವಿಶೇಷ ಇದ್ದೇ ಇರತ್ತೆ. ಯಾಕೆಂದರೆ ವೆರೈಟಿ ಹುಡುಗೀರು ಇಲ್ಲಿ ಇರ್ತಾರೆ. ಪಡ್ಡೆ ಹುಡುಗರ ಭಾಷೆಲ್ಲಿ ಹೇಳಬೇಕು ಅಂದ್ರೆ ಬಣ್ಣ ಬಣ್ಣದ ಚಿಟ್ಟೆಗಳು.