Tuesday, February 1, 2011

ನಾವು ಪತ್ರಕರ್ತರು, ನಮ್ಮ ಲೈಫು ಇಷ್ಟೇನೆ.....!!!

- ಅಶ್ವತ್ಥ ಕೋಡಗದ್ದೆ
ಬೆಳಗಿನ ಜಾವ ಸುಮಾರು 5 ಗಂಟೆ. ಖುರ್ಚಿಯ ಮೇಲೆ ಕುಳಿತರೂ ಕುಳಿತ ಹಾಗಲ್ಲ. ಏನೋ ಚಡಪಡಿಕೆ, ಮತ್ತೆನನ್ನೋ ಕಳೆದುಕೊಂಡಂತೆ. ಮೊದಲೇ ನೈಟ್ ಶಿಫ್ಟ್ ಅಂತಾ ಅಸಹನೆ ಬೇರೆ. ಅಂತಹುದರಲ್ಲಿ ಹೀಗಾಗಿಬಿಟ್ರೆ ಅದೆಷ್ಟು ಸಿಟ್ಟು ಬರಬೇಡ ಹೇಳಿ. ನಿನ್ನೆಯಂತೂ ಹಾಗಾಯ್ತು. ಇವತ್ತಾದ್ರೂ ಸಿಗುತ್ತಾ ಅಂದ್ರೆ ಅದೂ ಇಲ್ಲ. ಅಷ್ಟಕ್ಕೂ ನಾನು ಬಯಸ್ತಿರೋದು ಏನನ್ನಾ.? ನಾನೇನು ಕೋಟಿ ಕೋಟಿ ರೂಪಾಯಿ ಬೇಕು ಅಂತಿದೀನಾ? ಹಾಗೇನಿಲ್ವಲ್ಲ... ಆಪ್ಟರಾಲ್ ಒಂದು ಆಕ್ಸಿಡೆಂಟ್, ಮೂರು ಜನರ ಸಾವು. ಆಟ್ಲೀಸ್ಟ್ ಒಂದು ಕೊಲೆ. ಅದೂ ಆಗ್ಲಿಲ್ಲಾ ಅಂದ್ರೆ ಬೆಳಗಿನ ನ್ಯೂಸ್ ಗೆ ಫಸ್ಟ್ ಹೆಡ್ ಲೈನ್ ಮಾಡ್ಕೊಳ್ಳೋದಾದ್ರೂ ಹೇಗೆ. ಎಲ್ಲಾ ಹಳಸಲು ಸುದ್ದಿ. ಅದೇ ರಾಜಕಾರಣಿಗಳು ನಿನ್ನೆ ಎರಚಿಕೊಂಡ ಕೆಸರು, ಮಂತ್ರಿಗಳು ನೀಡಿದ ಸುಳ್ಳು ಭರವಸೆ. ಅದಕ್ಕೆಲ್ಲಾ ಯಾರಾದ್ರೂ ಸುದ್ದಿ ಅಂತಾರಾ.....

ಹೌದು... ಇದು ನನ್ನೊಬ್ಬನ ಆಲೋಚನಯಾಗ್ಲೀ, ಮಾತಾಗ್ಲೀ  ಅಲ್ಲಾ... ನನ್ನಂತ ಅದೆಷ್ಟೋ ಪತ್ರಕರ್ತರು ಹೀಗೇ ಆಲೋಚನೆ ಮಾಡ್ತಾರೆ ಅಂದ್ರೆ ವೀಕ್ಷಕರಿಗೆ ಆಶ್ಚರ್ಯ ಆದ್ರೆ ಅದು ಅವರ ತಪ್ಪಲ್ಲ. ಸುದ್ದಿಮನೆಗಳಲ್ಲಿ ಇವತ್ತು ಇರೋ ವಸ್ತುಸ್ಥಿತಿನೇ ಅಂತಾದ್ದು. ರಾತ್ರಿ ಮೂರು ಜನಾನಾದ್ರೂ ಸತ್ತಿಲ್ಲ ಅಂದ್ರೆ ಬೆಳಗ್ಗೆ ಸುದ್ದಿನೇ ಇಲ್ಲ ಎಂಬಂತೆ. ಅದ್ರಲ್ಲೂ  ಟಿವಿ ಚಾನೆಲ್ ಗಳಲ್ಲಿ ಈ ಗೊಣಗಾಟ ವಿಪರೀತ. ಇವತ್ತೇನ್ರಿ ಯಾರೂ ಸತ್ತೂ ಇಲ್ಲ ಅನ್ನೋ ಅಸಹನೆ ಬೇರೆ. ಎಲ್ಲೋ ಒಂದು ಕೊಲೆ ನಡೀತು ಅಂದ್ರೆ ಅಬ್ಬಾ ಫಸ್ಟ್ ಹೆಡ್ ಲೈನ್ ಗೆ ಸುದ್ದಿ ಆಯ್ತಲ್ಲಾ ಅನ್ನೋ ಖುಷಿ. ಪಾಪ ಇದು ಪತ್ರಕರ್ತರ ತಪ್ಪಲ್ಲ. ಈ ತಪ್ಪಿಗೆ ನೀವು ಅವರನ್ನಾ ಹೊಣೆಗಾರರನ್ನಾಗಿಸಬೇಡಿ. 24 ಗಂಟೆ ಸುದ್ದಿ ಕೊಡ್ಬೇಕು ಅನ್ನೋ ಕರ್ಮದಲ್ಲಿ ಬಿದ್ದಿರೋ ಅವರಾದ್ರೂ ಏನು ಮಾಡ್ತಾರೆ ಹೇಳಿ.
ನಾಲ್ಕೂವರೆ ವರ್ಷದ ಹಿಂದೆ ನಾನು ಈಟಿವಿಯ ಹೈದರಾಬಾದ್ ಆಫೀಸ್ ನಲ್ಲಿ ಕುಳಿತು ಮೊದಲ ದಿನ ನೈಟ್ ಶಿಫ್ಟ್ ಮಾಡಿ ಬೆಳಗಿನ ಜಾವ ಆಗ್ತಿದ್ದಂತೆ ನನ್ನ ಸೀನಿಯರ್ ಬಾಯಿಂದ ಈ ಮಾತುಗಳನ್ನಾ ಕೇಳಿ ಕಂಗಾಲಾಗಿಬಿಟ್ಟಿದ್ದೆ. ಒಬ್ಬರೇ ಸತ್ತಿದ್ದಾ? ಸ್ಕ್ರಾಲ್ ಗೆ ಹಾಕ್ಬಿಡಿ, (ಟಿವಿಯಲ್ಲಿ ಕೆಳಭಾಗದಲ್ಲಿ ಅಕ್ಷರ ರೂಪದಲ್ಲಿ ಚಿಕ್ಕದಾಗಿ ಸುದ್ದಿ ಹೋಗುತ್ತಿರುವುದಕ್ಕೆ ಸ್ಕ್ರಾಲ್ ಅಂತಾರೆ. ಕಾಂಜಿಪಿಂಜಿ ಸುದ್ಧಿಗಳಿಗೆ ಮಾತ್ರ ಅಲ್ಲಿ  ಅವಕಾಶ) ಓ ನಾಲ್ಕು ಜನ ಸತ್ತಿದ್ದಾರಾ ಬೇಗನೇ ಬ್ರೇಕಿಂಗ್ ಕೊಡಿ. (ದೊಡ್ಡ ದೊಡ್ಡ ಅಕ್ಷರದಲ್ಲಿ ಟಿವಿ ಸ್ಕ್ರೀನ್ ತುಂಬ ಗ್ರಾಫಿಕ್ಸ್ ಬರುವುದು) ಬೇರೆ ಚಾನೆಲ್ ಗಿಂತ ಮುಂಚೆ ನಾವೇ ಕೊಡ್ಬೇಕು ಅನ್ನೋ ಮಾತುಗಳನ್ನ ಕೇಳಿದಾಗ ಆಶ್ಚರ್ಯ ಆಗ್ತಿತ್ತು. (ಪತ್ರಕರ್ತರಾದ ನಾವು ಸಾವಿಗೆ ಬೆಲೆ ಕಟ್ಟೋದು ಹೇಗೆ ಅಂತಾ ನಾನು  ಕಲಿತುಕೊಂಡದ್ದು ಹಾಗೆ. )

ಇದೇನು ಯಾರಾದ್ರೂ ಸಾಯಲಿ ಅಂತಾ ಇಷ್ಟು ಸಲೀಸಾಗಿ ಹೇಳ್ತಾರಲ್ಲಾ ಅಂತಾ ಆಶ್ಚರ್ಯ ಆಗ್ಬಿಟ್ಟಿದ್ದೆ. ಜೀವದ ಬೆಲೆ ಇವರಿಗೆ ಗೊತ್ತಿಲ್ವಾ. ಅದೂ ಆಕ್ಸಿಡೆಂಟ್, ಕೊಲೆಯಾಗಿ ಸಾಯಲಿ ಅಂದರೆ ಏನು ಕಥೆ. ಯಾವುದೋ ಫ್ಯಾಕ್ಟರಿಗೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಭೂದಿ ಆಗ್ಲಿ ಅನ್ನೋದಕ್ಕೆ ಹೇಗೆ ಇವರಿಗೆ ಮನಸ್ಸು ಬರುತ್ತೆ ಅಂತಾ ಆವತ್ತು ತುಂಬಾ ಆಲೋಚನೆ ಮಾಡಿದ್ದೆ. ಇವರಿಗೇನು ಸಂವೇದನೆಗಳೇ ಇಲ್ವಾ ಅಂತಾ ನನ್ನನ್ನು ನಾನೇ ಪ್ರಶ್ನಿಸಿಕೊಂಡಿದ್ದೆ.
ನಾಲ್ಕು ತಿಂಗಳು ಅಷ್ಟೇ ಅದೆಲ್ಲಾ ರೂಡಿಯಾಗ್ಬಿಟ್ಟಿತ್ತು. ಜಗತ್ತಲ್ಲಿ ಅನಾಹುತಗಳಾಗದಿದ್ರೆ ಸುದ್ದಿ ಇಲ್ಲ ಅನ್ನೋದು ಗೊತ್ತಾಗೋದಕ್ಕೆ ಪ್ರಾರಂಭವಾಯ್ತು. ವರ್ಷದ ಬಳಿಕ ನಾನೂ ಹಾಗೇ ಗೊಣಗುವುದನ್ನಾ, ಬಳಿಕ ಅಸಹನೆಯಿಂದ ಹೊರಳಾಡೋದನ್ನಾ ಕಲಿತುಬಿಟ್ಟು. ಇವತ್ತಿಗೂ ಅದನ್ನ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದೇನೆ. ಹೈದರಾಬಾದ್ ನಿಂದ ಈಟಿವಿ ಬಿಟ್ಟು ಬೆಂಗಳೂರಿಗೆ ಬಂದೆ. ಆದ್ರೆ ನನ್ನ ಆ ಗೊಣಗಾಟವನ್ನ ಸ್ವಲ್ಪನೂ ಕಡಿಮೆ ಮಾಡಿಲ್ಲ.ಸ್ವಲ್ಪ ಜಾಸ್ತಿನೇ ಆಗಿದೆ ಅನ್ನಬಹುದೆನೋ. ಯಾಕೆಂದ್ರೆ ನಾನು ಬಂದಿದ್ದು 24 hours news channel ಗೆ. 24 ಗಂಟೆ ಸುದ್ದಿ ಕೊಡ್ಲೇ ಬೇಕಲ್ಲ. ನಮ್ಮ ನೈಟ್ ಬೀಟ್  ಕ್ರೈಂ ರಿಪೋರ್ಟರ್ ಹತ್ರಾ ದಿನವೂ ಕೇಳೋದು.. ಏನೂ ಕ್ರೈಂ ಇಲ್ವಾ ಸಾರ್ ಅಂತಾ... ಅವರೇನಾದ್ರೂ ಇದೆ ಅಂದ್ರೆ ಇಬ್ಬರಿಗೂ ಖುಷಿ.. ಕೆಲವೊಮ್ಮೆ ಅವರೂ ಹೇಳೋದು ಹಾಗೆ ಇರುತ್ತೆ. ಏನ್ ಸಾರ್ ಈ ವಾರದಲ್ಲಿ ನೈಟ್ ಒಂದು ಮರ್ಡರ್ ಆಗಿದ್ದು ಬಿಟ್ರೆ ಏನೇನೂ ಇಲ್ಲಾ ಸಾರ್... ನೈಟ್ ಸುದ್ದಿನೇ ಇಲ್ಲಾ. ಸಖತ್ ಬೋರ್ ಆಗ್ಬಿಟ್ಟಿದೆ.. ಇದಕ್ಕೆ ಏನಂತೀರಿ ?
ಅಂದು ಬೇರೆಯವರನ್ನ ನೋಡಿ ಇವರಿಗೇನು ಸಂವೇದನೆಗಳಿಲ್ವಾ ಅಂತಾ ನಾನು ಪ್ರಶ್ನಿಸ್ತಿದ್ದೆ. ಇವತ್ತು ನನ್ನನ್ನು ನಾನು ಪ್ರಶ್ನಿಸಿಕೊಳ್ತಾ ಇದ್ದೇನೆ. ನಾನು ಸಂವೇದನೆಗಳನ್ನಾ ಉಳಿಸಿಕೊಂಡಿದ್ದೇನಾ. ಮನಸ್ಸು ಅನ್ನೋದು ಸತ್ತು ಹೋಗ್ಬಿಟ್ಟಿದೆಯಾ. ? ಹೀಗೆ ಮುಂದುವರಿದ್ರೆ ಮುಂದೊಂದು ದಿನ ಸಂವೇದನೆ, ಸಂಬಂಧ ಅನ್ನೋ ಶಬ್ದವೇ ನಮ್ಮಂತಾ ಪತ್ರಕರ್ತರಿಂದಾ ರೆಯಾಗಿ ಬಿಡುತ್ತಾ? ಡಿಕ್ಷ್ನೆರಿಗಳನ್ನ ಹಿಡ್ಕೊಂಡು ಅದರ ಅರ್ಥ ಹುಡುಕಬೇಕಾಗುತ್ತಾ? ಹಾಗೆ ಆದ್ರೂ ಆಶ್ಚರ್ಯ ಇಲ್ಲಾ ಅನ್ಸತ್ತೆ ಅಲ್ವಾ….!?  
ಟಿಆರ್ ಪಿ ಅನ್ನೋ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿರೋ ನಮ್ಮಲ್ಲಿ ಈ ಸಂವೇದನೆಗಳಿಗೆಲ್ಲಾ ಮೊಳೆತು ಗಿಡವಾಗಿ ಹೂವು ಬಿಡೋದು ಕಷ್ಟ ಅನ್ಸಿಬಿಟ್ಟಿದೆ.