Thursday, October 18, 2012

ಮಾಧ್ಯಮಗಳಿಗೆ ಬೈಯ್ಯುವವರು ಒಮ್ಮೆ ಇತ್ತ ನೋಡಿ…!


-    -  ಅಶ್ವತ್ಥ ಕೋಡಗದ್ದೆ
ಇಂದಿನ ಮಾಧ್ಯಮಗಳನ್ನು ವಿಮರ್ಷೆ ಮಾಡುವ, ತಪ್ಪುಗಳನ್ನು ಎತ್ತಿ ತೋರಿಸುವ ಒಂದು ವರ್ಗ ಇಂದಿನ ಸಮಾಜದಲ್ಲಿದೆ.  ಅದರಲ್ಲಂತೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಆಗುಹೋಗುಗಳನ್ನು ಬಹಳ ಗಂಭೀರವಾಗಿ ವಿಮರ್ಶೆ ಮಾಡುವ ಗುಂಪು ಇದು. ಇದು ಹಾಗಲ್ಲ, ಹೀಗಾಗಬೇಕಿತ್ತು ಎಂದು ಸರಿ ಮಾಡಿ ನಡೆಯಲು ಸ್ವಲ್ಪ ಮಾಡಿಕೊಡುವ ಗುಂಪು ಇದು. ಇರಲಿ, ಇವರ ಬಗ್ಗೆ ಗೌರವವಿದೆ. ಎಲೆಕ್ಟ್ರಾನಿಕ್ ಮಾಧ್ಯಮದ ಬೆಳವಣಿಗೆಗೆ ಇದು ಸಹಕಾರಿ ಆಗಬಹುದೇನೋ.


ಆದರೆ ಎಲೆಕ್ಟ್ರಾನಿಕ್ ಮಾಧ್ಯಮದ ಮೇಲೆ ದ್ವೇಷ ಕಾರೂ ಕೆಲ `ವ್ಯಕ್ತಿ’ಗಳೂ ಇಂದು ಹುಟ್ಟಿಕೊಳ್ಳುತ್ತಿದ್ದಾರೆ. ನೀವು ಮಾಡ್ತಿರೋದೆಲ್ಲಾ ತಪ್ಪು. ಇವರಿಗೆ ಮಾಡೋದಕ್ಕೆ ಬೇರೆ ಕೆಲಸ ಇಲ್ಲ  ಅನ್ನೋದು ದಾಟಿಯಲ್ಲಿ ಮಾತನಾಡೋದು ಇವರ ಜಾಯಮಾನ. ಓಕೆ ನಾವು ಮಾಡೋದು ತಪ್ಪು. ಒಪ್ಪಿಕೊಳ್ಳೋಣ. ಸರಿಯಾದ ಮಾರ್ಗ ಯಾವುದಯ್ಯಾ ಅಂತಾ ಕೇಳಿದ್ರೆ ಇವರ ಬಳಿ ಉತ್ತರ ಇಲ್ಲ.

ನಾನೇನು ಎಲೆಕ್ಟ್ರಾನಿಕ್ ಮಾಧ್ಯಮದ ವಕ್ತಾರನಂತೆ ಇಲ್ಲಿ ಮಾತನಾಡುತ್ತಿಲ್ಲ. ಆದರೆ ಇಲ್ಲಿ ಕೆಲಸ ಮಾಡಿದ5-6 ವರ್ಷದ ಅನುಭವದಲ್ಲಿ, ಅದಕ್ಕಿಂತ ಹೆಚ್ಚಾಗಿ ಒಬ್ಬ ವೀಕ್ಷಕನಾಗಿ ಈ ಕೆಲ ಮಾತನ್ನ ಹೇಳ್ತಿದ್ದೇನೆ. ಈ ಎಲೆಕ್ಟ್ರಾನಿಕ್ ಮಾಧ್ಯಮಗಳೇ ಸರಿ ಇಲ್ಲ ಅನ್ನೋ ಮಂದಿಗೆ ಒಂದು ಪ್ರಶ್ನೆ ಕೇಳ್ತೇನೆ… ಈ ನ್ಯೂಸ್ ಚಾನೆಲ್ ಗಳು ಇಲ್ಲದಿದ್ರೆ ರಾಜಕಾರಣಿಗಳ ಕಪಟತನ, ಭ್ರಷ್ಟಾಚಾರ ಬಯಲಾಗ್ತಿತ್ತಾ..? ಡೋಂಗಿ ಬಾಬಾಗಳ ಬಂಡವಾಳ ಬಯಲಾಗ್ತಿತ್ತಾ..? ಅತ್ಯಾಚಾರ, ಅನಾಚಾರದಿಂದ ನಲುಗಿದ ಹೆಣ್ಣಿಗೆ ನ್ಯಾಯ ಸಿಗ್ತಿತ್ತಾ..? ನಾವೆಲ್ಲರೂ ಹಗಲೂ ರಾತ್ರಿ ಕುಳಿತು ನೋಡುವ ಕ್ರಿಕೆಟ್ ನಲ್ಲಿ ಫಿಕ್ಸಿಂಗ್ ಇದೆ ಅನ್ನೋದು ಗೊತ್ತಾಗ್ತಿತ್ತಾ…?
ನೋಡಿ ಬೇಕಿದ್ರೆ, 1986 ರಲ್ಲಿ ಪತ್ರಕರ್ತೆ ಚಿತ್ರಾ ಸುಬ್ರಹ್ಮಣಿಯನ್ ಬೋಪೋರ್ಸ್ ಹಗರಣ ಹೊರಗೆ ಹಾಕಿದ್ಲು. ಆಗಿನ ಕಾಲದಲ್ಲಿ 64 ಕೋಟಿ ರೂಪಾಯಿ ಹಗರಣ ಅದು.  ಎಷ್ಟೊಂದು ಸದ್ದು ಮಾಡ್ತು ಅದು. ಇಂದಿಗೂ ಹಗರಣಗಳ ಪಟ್ಟಿ ಬಂದಾಗ ಮೊದಲು ನೆನಪಾಗೋದೇ ಅದು. ಬಳಿಕ ಎಷ್ಟೋ ಹಗರಣಗಳಾದ್ವು. ಎರಡು ವರ್ಷದ ಹಿಂದೆ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದು 2ಜಿ ಸ್ಪೆಕ್ಟ್ರಂ ಹಗರಣ. ಕೇಂದ್ರ ಸರ್ಕಾರ 1.76 ಲಕ್ಷ ಕೋಟಿ ರೂಪಾಯಿ ನುಂಗಿ ನೀರು ಕುಡಿದಿತ್ತು. ಇದನ್ನು ಹೈಪ್ ಮಾಡಿದ್ದು ನ್ಯೂಸ್ ಚಾನೆಲ್. ಆಗ ದಿನಗಟ್ಟಲೇ ನ್ಯೂಸ್ ಚಾನೆಲ್ ಗಳು ಈ ಬಗ್ಗೆ ಮಾಹಿತಿ  ಕೊಡ್ತಾ ಇರದಿದ್ರೆ ರಾಜಾ, ಕನ್ನಿಮೋಳಿಯಂತವರು ಜೈಲಿಗೆ ಹೋಗೋದಕ್ಕೆ ಸಾಧ್ಯವಾಗ್ತಿತ್ತಾ..? ಸುಬ್ರಹ್ಮಣಿಯನ್ ಸ್ವಾಮಿ ಒಬ್ಬರೇ ತಾನೇ ಏನು ಮಾಡಿಯಾರು. ಮೊನ್ನೆ ಮೊನ್ನೆ ತಾನೇ 1.86 ಲಕ್ಷ ಕೋಟಿ ರೂಪಾಯಿಯ ಕಲ್ಲಿದ್ದಲು ಹಗರಣ ಬಯಲಾಯ್ತಲ್ಲ ಇದನ್ನು ಜಗತ್ತಿನ ಮುಂದೆ ಹಿಡಿದು ತೋರಿಸಿದ್ದು ಇದೇ ನ್ಯೂಸ್ ಚಾನೆಲ್ ಗಳು ತಾನೇ...

ಇನ್ನು ರಾಜ್ಯದ ಮಟ್ಟಿಗೆ ಹೇಳೋದಾದ್ರೆ ಬಂಗಾರಪ್ಪ, ಹೆಗಡೆ, ಯಡ್ಡಿ, ರೆಡ್ಡಿ ಇವರೆಲ್ಲರ ಹಗರಣಗಳನ್ನು ಬಯಲಿಗೆ ತಂದಿದ್ದೇ ಮಾಧ್ಯಮಗಳು. ದಿನಗಟ್ಟಲೇ ಇದನ್ನೇ ಏಕೆ ತೋರಿಸ್ತೀರಿ ಅಂತಾ ಕೇಳೋರು ಒಮ್ಮೆ ಯೋಚಿಸಿ. ನೀವು ವೋಟ್ ಹಾಕಿ ಕಳುಹಿಸಿದ ಪುಣ್ಯಾತ್ಮರು ಹೀಗೆ ಮಾಡ್ತಿದ್ದಾರೆ ನೋಡಿ ಅಂತಾ ಜನರಿಗೆ ತೋರಿಸೋದು ತಪ್ಪಾ…? ನೀವು ದೇವರೆಂದು ನಂಬಿದ ಸ್ವಾಮೀಜಿಗಳು ಎಷ್ಟು ಕಪಟಿಗಳು ಅಂತಾ ನಿಮ್ಮೆದುರು ತೆರೆದಿಡೋದು ತಪ್ಪಾ..?

ಇಷ್ಟಕ್ಕೂ ಚಾನೆಲ್ ಗಳ ಮೇಲೆ ಜನರಿಗೆ ಬೇಸರ ಬರೋದಕ್ಕೆ ಕಾರಣ ಚಾನೆಲ್ ಗಳಲ್ಲ. ಸಮಾಜದಲ್ಲಿನ ಬೆಳವಣಿಗೆ. ಭ್ರಷ್ಟಾಚಾರ ಈಗಿನಷ್ಟಲ್ಲದಿದ್ರೂ ಮೊದಲೂ ಕೆಲ ಪ್ರಮಾಣದಲ್ಲಿತ್ತು. ಅವು ಬೆಳಕಿಗೆ ಬಂದಾಗ ಭ್ರಷ್ಟಾಚಾರ ಮಾಡಿದವರಿಗೆ ಬಯ್ತಾ ಇದ್ರು. ಆದರೆ ಇಂದು ಸಮಾಜದಲ್ಲಿನ ಅಕ್ರಮ ಬಯಲಾಗೋ ಪ್ರಮಾಣ ಜಾಸ್ತಿ ಆಗಿದೆ. ಅದಕ್ಕೆ ಜನ ಖುಷಿ ಪಡಬೇಕಿತ್ತು. ಭ್ರಷ್ಟರ ಮುಖವಾಡ ಕಳಚಿ ಬೀಳ್ತಿದೆಯಲ್ಲಾ ಅನ್ನೋ ಸಮಾಧಾನ ರಬೇಕಿತ್ತು. ಆದರೆ ನ್ಯೂಸ್ ಚಾನೆಲ್ ನವರಿಗೆ ಬೇರೆ ಕೆಲಸ ಇಲ್ಲಾ ಅನ್ನೋ ಮಾತು ಕೇಳಿ ಬರ್ತಿದ್ದಾವೆ.

ಹೌದು, ಈ ಅಕ್ರಮಗಳನ್ನು ನೋಡಿ ನೋಡಿ ಜನ ಬೇಸತ್ತಿದಾರೆ. ಈಗ ಅದನ್ನು ನೋಡೋದೂ ಬೇಸರ ಅನ್ನೋ ಮನಸ್ಥಿತಿಗೆ ಜನ ಬಂದಿರಬಹುದಾ..? ಹತ್ತು ವರ್ಷದ ಹಿಂದೆ ‘ಹಾಯ್ ಬೆಂಗಳೂರು’ ಪತ್ರಿಕೆ ಅಷ್ಟೊಂದು ಸೇಲ್ ಆಗೋದಕ್ಕೆ ಅದೇ ಕಾರಣ. ಯಾವುದೋ ಕೊಲೆ, ಅತ್ಯಾಚಾರ, ಭ್ರಷ್ಟಾಚಾರದ ಬಗ್ಗೆ ಬರೆದಾಗ ಅದನ್ನು ಓದೋ ಆಸಕ್ತಿ ಜನರಲ್ಲಿ ಅಂದು ಇತ್ತು. ಆದರೆ ಇಂದು ದಿನಕ್ಕೆ ಇಪ್ಪತ್ತು ಕೊಲೆ ಅತ್ಯಾಚಾರದ ಸುದ್ದಿ ಗೊತ್ತಾಗಬೇಕಿದ್ರೆ ಅದನ್ನು ಯಾರು ಓದುತ್ತಾರೆ. ಹಾಗಾಗಿ `ಹಾಯ್ ಬೆಂಗಳೂರು’ ಈ ಸ್ಥಿತಿಯಲ್ಲಿದೆ.

ಟಿವಿ ಚಾನೆಲ್ ಗಳ ಸ್ಥಿತಿ ಈಗ ಇದೇ ರೀತಿ ಆಗಿದೆ. ಸಮಾಜದಲ್ಲಿನ ಕೆಟ್ಟ ಬೆಳವಣಿಗೆಯ ಬೇಸರ ಚಾನೆಲ್ ಗಳ ಮೇಲೆ ತಿರುಗುತ್ತಿದೆ. ಅವುಗಳನ್ನು ತೋರಿಸೋದೇ ತಪ್ಪು ಅಂತಾ ಹೇಳೋದಕ್ಕೆ ಶುರು ಮಾಡಿದ್ದಾರೆ. ಕೆಲ ಚಾನೆಲ್ ಗಳು ಕೆಲ ಸುದ್ದಿಗಳನ್ನು ಸ್ವಲ್ಪ ಮಟ್ಟಿಗೆ ಅತಿ ಎನ್ನಿಸುವಷ್ಟು ತೋರಿಸಿದರೂ ಕೂಡ ಯಾರೂ ಸಮಾಜದ ಮೇಲಿನ ಕಳಕಳಿಯನ್ನು ಮೀರಿ ನಿಂತಿಲ್ಲ. ಎಲ್ಲ ಕಪಟಿಗಳ ಮುಖವಾಡ ಬಯಲಾಗಲಿ ಅನ್ನೋದು ಚಾನೆಲ್ ಗಳಿಗಿರೋ ಮೂಲ ಆಶಯ.

ಕೊನೆ ಮಾತು: ರೆಡ್ಡಿ ಎಷ್ಟು ಅಕ್ರಮ ಗಣಿಗಾರಿಕೆ ಮಾಡಿರಲಿ, ಯೆಡ್ಡಿ ಎಷ್ಟ ಭೂಮಿಯನ್ನು ನುಂಗಿರಲಿ… ಕಾಂಗ್ರೆಸ್ ನವರು ಎಷ್ಟೇ ಭ್ರಷ್ಟಾಚಾರ ಮಾಡಿರಲಿ. ಮುಂದಿನ ಚುನಾವಣೆಯಲ್ಲಿ ಜನ ಅವರಿಗೇ ಓಟ್ ಹಾಕ್ತಾರೆ. ಅವರನ್ನೇ ಆರಿಸಿ ತರ್ತಾರೆ. ಯಾಕೆಂದ್ರೆ ಇವುಗಳನ್ನೆಲ್ಲಾ ಬಯಲಿಗೆ ತಂದಿದ್ದು ಮಾಧ್ಯಮಗಳು. ಮಾಧ್ಯಮಗಳು ಹೇಳೋದೆಲ್ಲಾ ಸುಳ್ಳು ಅನ್ನೋ ಮನಸ್ಥಿತಿ..!