Monday, October 18, 2010

ಗೆಸ್ಟ್ ಕಾಲಂ

ಈ ಬೀಚುಗಳೇ ಹೀಗೆ, ವಿಶಾಲ ಹೃದಯಿಗಳು...
- ಸುಭಾಸ್ ಧೂಪದಹೊಂಡಈ ಕಡಲ ತೀರಗಳೇ ಹೀಗೆ ವಿಶಾಲ ಹೃದಯಿಗಳು....!! ಅವುಗಳ ಒಡಲಲ್ಲಿ  ಜಾತಿಯ ಬೇದವಿಲ್ಲ,
ಧರ್ಮದ ಕಟ್ಟಲೆಯಿಲ್ಲ,  ವಯಸ್ಸಿನ ಅಂತರವಿಲ್ಲ, ತನ್ನ ಬಳಿ ಬಂದ ಎಲ್ಲರನ್ನು ಒಂದೇ
ಭಾವದಿಂದ ಆದರಿಸಿ ಆನಂದ ನೀಡುವುದು ಅವುಗಳ ಧರ್ಮ.
ಬಾಳಿನ ಇಳಿ ಹೊತ್ತಿನಲ್ಲಿರುವವರಿಗೆ ಇದೊಂದು ಹೊತ್ತು ಕಳೆಯುವ ಜಾಗ. ಮಕ್ಕಳಿಗೆ ಮರಳುತನದ
ಯೋಗ. ನವ ದಂಪತಿಗಳಿಗೆ ಇಲ್ಲಿ ಕೈ ಹಿಡಿದು ಸುತ್ತಾಡುವ ಸುಯೋಗ. ಇನ್ನು ಯುವಕ
ಯುವತಿಯರಿಗೆ ಅವರು ಇವರನ್ನು, ಇವರು ಅವರನ್ನು ಹುಡುಕುವ, ಕಣ್ಣಿನಲ್ಲೇ ಕಡಲ
ಅಲೆಗಳೊಂದಿಗೆ ಸ್ಪರ್ಧಿಸುವಷ್ಟು ಪ್ರೀತಿಯ ಅಲೆಗಳನ್ನು ಹರಿಸುವ ಜಾಗ. ಅಗತ್ಯಕ್ಕಿಂತ
ಹೆಚ್ಚು ದೇಹ ಬೆಳೆಸಿಕೊಂಡವರಿಗೆ ಇದು ವಾಕಿಂಗ್ ಸ್ಪಾಟ್ . ಒಟ್ಟಿನಲ್ಲಿ ಈ ಕಡಲ ತೀರ
ಎಂಬಲ್ಲಿ ಒಂದು ಸಣ್ಣ ವಿಶ್ವ ದರ್ಶನವಾಗುತ್ತದೆ.


ಮುಸ್ಲಿಂ ಕುಟುಂಬವೊಂದು ಬಂದು ಮರಳಿನ ಮೇಲೆ ಉರುಟಾಗಿ ಕುಳಿತು ಕಡಲೆ
ತಿನ್ನುತ್ತಿದ್ದರೆ ಅದಾವುದೋ ಫಾರಿನ್ ಜೋಡಿಗಳು ಸಮುದ್ರದ ಅಲೆಗಳೊಂದಿಗೆ ನೀರಿನಲ್ಲಿ
ಆಟವಾಡುತ್ತಿರುತ್ತವೆ. ಹಿಂದೂ ಅಜ್ಜ-ಅಜ್ಜಿ ತಮ್ಮ ಮೊಮ್ಮಕ್ಕಳೊಂದಿಗೆ ಬಂದು
ಮರಳಿನಲ್ಲಿ ಈಶ್ವರ ಲಿಂಗ ರಚಿಸಿ ಖುಷಿ ಪಡುತ್ತಿರುತ್ತವೆ. ಒಂದು ಪುಟ್ಟ ಭಾರತದ
ಕಲ್ಪನೆ ಬರಬೇಕು ಎಂದರೆ ಇಲ್ಲಿಗೆ ಬರಬೇಕು.
ನಮ್ಮ ಸುತ್ತಲಿರುವವರಲ್ಲಿ ಯಾರಾದರೊಬ್ಬರು ಕಡಲ ತಡಿಯನ್ನು ಇಷ್ಟ ಪಡದವರಿದ್ದರೆ ತಂದು
ನಿಲ್ಲಿಸಿ ನೋಡೋಣ. ಏಕೆಂದರೆ ಆ ಬೀಚುಗಳೇ ಹಾಗೆ, ಒಂಟಿ ಜೀವಿಗಳ ಜೊತೆ ಹರಟುತ್ತವೆ.
ವಿರಹಿಗಳಿಗೆ ಸಮಾಧಾನ ಹೇಳುತ್ತವೆ. ಹೊಸ ಬದುಕಿನ ಹುಡುಕಾಟದಲ್ಲಿರುವವರಿಗೆ ವಿಶಾಲ
ಜಗತ್ತಿನ ಆಘಾಧತೆಯ ಪರಿಚಯ ಮಾಡಿಸುತ್ತವೆ. ವಿಪರ್ಯಾಸವೆಂದರೆ ಜೀವವೇ ಬೇಡ ಎಂದವರಿಗೆ
ಇದೇ ಕಡಲ ತೀರಗಳು ಆತ್ಮಹತ್ಯೆಯ ಸ್ಥಳಗಳೂ ಆಗುತ್ತವೆ..


ಎಷ್ಟೇ ಹೊತ್ತು ಕುಳಿತುಕೊಳ್ಳಿ ಅಲ್ಲಿ ಬೇಸರ ಎಂಬುದಿಲ್ಲ. ಪ್ರತಿ ಕ್ಷಣವೂ ಹೊಸತನ, ಹೊಸ
ಆಲೋಚನೆ, ಹೊಸ ವಿಚಾರಗಳನ್ನು ಎದುರಿನ ಆ ವಿಶಾಲ ಸಮುದ್ರ ತೆರೆದಿಡುತ್ತದೆ.  ಸಾಗರ
ಒಮ್ಮೆ ನಮ್ಮನ್ನು ಅತಿ ಕುಬ್ಜರನ್ನಾಗಿಸಿ ಹೆದರಿಸಿದರೆ ಇನ್ನೊಮ್ಮೆ ತನ್ನ ಜೊತೆ
ನಮ್ಮನ್ನು ಲೀನವಾಗಿಸಿ ನಮ್ಮ ಆಲೋಚನೆಯನ್ನು ವಿಶಾಲವಾಗಿಸುತ್ತದೆ. ಕವಿಗೆ ಕಡಲ ತಡಿಯ
ಸೂರ್ಯಾಸ್ತ ಉತ್ತಮ ವಸ್ತು. ಚಿತ್ರಕಾರನಿಗೆ ಸೂರ್ಯಾಸ್ತದ ಬಣ್ಣದೋಕುಳಿಯ ಚಿತ್ರಣ ಒಂದು
ಸವಾಲು. ವಿಜ್ಞಾನಿಗೆ ಪರಮ ಸತ್ಯಗಳನ್ನು ಬಿಚ್ಚಿಡುವ ಪ್ರಯೋಗ ಶಾಲೆ. ಪತ್ರಕರ್ತನಿಗೆ
ಸುದ್ದಿಯ ಕೇಂದ್ರ. ಭಿಕ್ಷುಕನಿಗೆ ಹೆಚ್ಚು ಭಿಕ್ಷೆ ದೊರೆಯುವ ಪುಣ್ಯ ಸ್ಥಳ.
ಇದಾವುದು ಅಲ್ಲದ ಕಡಲೆ ಕಾಯಿ ಮಾರುವವನಿಗೆ ಇದು ಉತ್ತಮ ವ್ಯಾಪಾರದ ಕೇಂದ್ರ.
ಮೀನುಗಾರನಿಗೆ ಅನ್ನ ನೀಡುವ ಜಾಗ.  ಅಷ್ಟೇ ಅಲ್ಲ ವಿಶ್ವದ ಎಲ್ಲ ಜನರನ್ನು ಸೆಳೆದು ಮುದ
ನೀಡುವ ಈ ಕಡಲ ತೀರಗಳು ಅತಿ ಹೆಚ್ಚು ಅವ್ಯವಹಾರ ನಡೆಯುವ ತಾಣಗಳು ಹೌದು. ಕಳ್ಳತನ
ದರೋಡೆಗೆ ಇದು ಮುಖ್ಯ ದ್ವಾರ. ಗಾಂಜಾ, ಅಫೀಮು, ಮುಂತಾದ ಅಮಲಿನ ಪದಾರ್ಥಗಳು
ಲಭ್ಯವಿರುವುದೂ ಇಲ್ಲೇ.  ಹೀಗೆ ಎಲ್ಲರೊಳಗೊಂದಾಗಿ ಅವರವರ ಭಾವಕ್ಕೆ ತಕ್ಕಂತ ಸ್ಪಂದಿಸುವ
ವಿಶಾಲ ಹೃದಯ ಈ ಕಡಲ ತೀರಕ್ಕೆ ಮಾತ್ರ ಇದೆ ಅನ್ನಿಸುವುದಿಲ್ಲವೇ..?

ಬನ್ನಿ ಕರ್ನಾಟಕದ ಕಾರವಾರ ಕಡಲ ತೀರದಲ್ಲಿ ಸುತ್ತಾಡೋಣ. ನೀರಾಟವಾಡೋಣ.
ಕಡಲೆ ಕಾಯಿ ತಿನ್ನುತ್ತ ಕಡಲಿನ ಅಲೆಗಳಲ್ಲಿ ಒಂದಾಗಿ ವಿಹರಿಸೋಣ....

1 comment:

  1. ಸುಭಾಸ್ ಧೂಪದಹೊಂಡ ,
    ಕಡಲ ತೀರದ ಮಾತು ಕಥೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
    ಹಳ್ಳಿ ಹುಡುಗ್ರಾ!
    nimagu thanks :)

    ReplyDelete