Wednesday, October 27, 2010

ಸ್ನೇಹ ಕಳೆದುಕೊಳ್ಳೋದು ಅಷ್ಟೊಂದು ಕಷ್ಟನಾ ?


- ಅಶ್ವತ್ಥ ಕೋಡಗದ್ದೆ
'ಸ್ನೇಹಿತರನ್ನು ಮಾಡಿಕೊಳ್ಳೋದು ಕಷ್ಟ. ಅದ್ರಲ್ಲೂ ಕ್ಲೋಸ್ ಫ್ರೆಂಡ್ ಅಂತಾರಲ್ಲ ಅಂತವರು ಆಗೋದು ತುಂಬಾನೇ ಕಷ್ಟ ಬಿಡಿ. ಆದ್ರೆ ಅದನ್ನಾ ಕಳೆದುಕೊಳ್ಳೋದು ಯಾವ ದೊಡ್ಡ ಮಾತು. ಒಂದು ನಿಮಿಷದ ಮಾತಷ್ಟೇ. ಹೀಗೆ ಸಾಗಿತ್ತು ಅವನ ಮಾತಿನ ದಾಟಿ.

ಆಗ ನಾನಂದೆ, ಕೆಲವೊಮ್ಮೆ ಸ್ನೇಹ ಕಳೆದುಕೊಳ್ಳೋದು ಎಷ್ಟೊಂದು ಕಷ್ಟ ಅನ್ನಿಸಿಬಿಡುತ್ತೆ ಅಲ್ವಾ. ಅದಕ್ಕೆ ಅವನು ಒಪ್ಪದಿದ್ದಾಗ ಮತ್ತಷ್ಟು ವಿವರಿಸಿ ಹೇಳ್ಬೇಕಾಯ್ತು.

ಸ್ನೇಹ ಮಾಡಿದ್ಮೇಲೆ ಕಳೆದುಕೊಳ್ಳಬಾರದು, ಲೈಫ್ ಲಾಂಗ್ ಅದನ್ನಾ ಇಟ್ಕೊಳ್ಳಬೇಕು ಅನ್ನೋದು ಸರಿಯಾದ ಮಾತೇ. ಆದ್ರೆ ಎಲ್ಲರ ಜೀವನದಲ್ಲೂ ಒಮ್ಮೆನಾದ್ರೂ ಸ್ನೇಹ ಕಳೆದುಕೊಳ್ಳೋ ಸಮಯ ಬಂದೇ ಬರುತ್ತೆ. ಯಾರಾದ್ರೂ ಎದೆ ತಟ್ಟಿಕೊಂಡು ನಾನು ಇವತ್ತಿನ ವರೆಗೆ ಯಾರೊಂದಿಗೂ ಸ್ನೇಹ ಕಳೆದುಕೊಂಡಿಲ್ಲ ಅಂತಾ ಹೇಳ್ಬಿಡ್ಲಿ. ಆಗ ಅವ್ರಿಗೆ ನೆನಪಿಸು ನಿಮ್ಮ ಜೀವನ ಇನ್ನೂ ಮುಗಿದಿಲ್ಲ ಅಂತಾ.

ಆತ ಸ್ವಲ್ಪ ನನ್ನ ಹಾದಿಗೆ ಬಂದಂತಿತ್ತು.

ಈ ಸ್ನೇಹ ಕಟ್ ಆಗೋದಕ್ಕೆ ಕಾರಣಗಳೇ ವಿಚಿತ್ರ. ನಾನು ಕಾಲೇಜ್ ಗೆ ಹೋಗೋವಾಗಿನ ಒಂದು ಘಟನೆ ಹೇಳ್ತೇನೆ. ಇಬ್ಬರು ಹುಡುಗೀರಿದ್ರು. ನನಗೆ ಇಬ್ರೂ ಒಳ್ಳೇ ಸ್ನೇಹಿತೆಯರೇ. ಜೊತೆಗೆ ಅವರೂ ಒಳ್ಳೇ ಸ್ನೇಹಪರರೇ. ಆದರೆ ಅವರು ಒಬ್ಬರಿಗೊಬ್ರು ಮಾತಾಡ್ಕೊಳ್ತಿರಲಿಲ್ಲ. ನನಗೂ ಅದೇ ಆಶ್ಚರ್ಯ. ಒಂದಿನ ಒಬ್ಳತ್ರಾ ಕೇಳ್ಬಿಟ್ಟೆ. ಯಾಕೆ ನೀವಿಬ್ರು ಮಾತಾಡ್ಕೊಳಲ್ಲಾ ಅಂತಾ. ಆಗ ಅವಳು ಹೇಳಿದ್ದು ಕೇಳಿ ನನಗೆ ಮತ್ತೂ ಆಶ್ಚರ್ಯ. ಇಬ್ಬರೂ ಕಾಲೇಜಿಗೆ ಬಂದ ಕೂಡ್ಲೆ ಹಾಯ್ ಹೇಳ್ಕೊಳ್ಬೇಕು ಅನ್ನೋದು ಅಲಿಖಿತ ಒಪ್ಪಂದ ಆಗಿತ್ತಂತೆ. ಒಂದು ದಿನ ಅದ್ಯಾವ ಟೆನ್ಶನ್ ನಲ್ಲಿದ್ಲೋ ಏನೋ, ಒಬ್ಳು ಹಾಯ್ ಹೇಳ್ಲೇ ಇಲ್ಲ. ಅವತ್ತಿನಿಂದನೇ ಮತ್ತೊಬ್ಳು ಮಾತು ಬಿಟ್ಟುಬಿಟ್ಲು. 2 ವರ್ಷ ಆದ್ರೂ ಮಾತೇ ಆಡ್ಲಿಲ್ಲ. ಎಷ್ಟು ವಿಚಿತ್ರಾ ಅಲ್ವಾ?

ಇನ್ನು ಹುಡುಗರ ವಿಷಯಕ್ಕೆ ಬಂದ್ರೆ ಅವರದ್ದು ಮತ್ತೂ ವಿಚಿತ್ರಾ. ಗುಟ್ಕಾ ಹಾಕ್ಬೆಡೋ ಅಂದ್ರೆ ಮತ್ತೊಬ್ಬನಿಗೆ ಬೇಜಾರಾಗಿ ಬಿಡುತ್ತೆ. ಲೇ, ಅವ್ಳು ನಿನಗೆ ಬೀಳಲ್ಲಾ ಸುಮ್ನೆ ಅವಳ ಹಿಂದೆ ಬಿದ್ದು ಜೀವನಾ ಯಾಕೆ ಹಾಳ್ಮಾಡ್ಕೋತಿಯಾ ಅಂದ್ರೆ ಸ್ನೇಹಿತನನ್ನೇ ವೈರಿ ತರಾ ನೋಡ್ತಾನೆ ಅಂತಾ ಹೇಳ್ತಾ ಅವನ ಮುಖ ನೋಡ್ದೆ.

ಸರಿ ಇವೆಲ್ಲಾ ಆಕಸ್ಮಿಕ ಅಲ್ವಾ? ಅವನ ಮರುಪ್ರಶ್ನೆ.

ಹೌದು ಇವೆಲ್ಲ ಆಕಸ್ಮಿಕ, ನಾಲ್ಕಾರು ದಿನ ಮನಸ್ಸು ಕೊರಗಬಹುದು. ನಂತರ ಸರಿಯಾಗಿ ಬಿಡುತ್ತೆ. ಆದ್ರೆ ಒಬ್ಬನೊಂದಿಗೆ ಸ್ನೇಹವನ್ನು ಕಳೆದುಕೊಳ್ಳಬೇಕು ಎಂದು ನಿಶ್ಚಯಿಸಿ ಕಳೆದುಕೊಳ್ಳೋದಿದೆಯಲ್ಲಾ ಅದಕ್ಕಿಂತಾ ಯಾತನೆ ಮತ್ತೊಂದಿಲ್ಲ ಗೊತ್ತಾ. ಆದರೆ ಅನಿವಾರ್ಯತೆಗೆ ಕಟ್ಟುಬಿದ್ದು ಸ್ನೇಹ ಕಳೆದುಕೊಳ್ಳಬೇಕಾಗುತ್ತೆ. ವರ್ಷಗಟ್ಟಲೇ ಓಡಾಡಿ, ಹರಟೆ ಹೊಡೆದ, ಹೆಗಲಿಗೆ ಹೆಗಲು ಕೊಟ್ಟವನ ಸ್ನೇಹವನ್ನು ಒಮ್ಮೆಲೆ ನಿಶ್ಚಯಿಸಿ ಬಿಡುವುದಿದೆಯಲ್ಲಾ ಅದು ಕಠೋರ ಅನ್ನಿಸಿಬಿಡುತ್ತೆ

ಸ್ನೇಹ ಅಂದ್ರೇನೇ ಹೊಂದಾಣಿಕೆ ಮತ್ತು ನಂಬಿಕೆ. ಯಾವತ್ತು ಅಪನಂಬಿಕೆ ಮತ್ತು ಹೊಂದಾಣಿಕೆ ಕೊರತೆ ಬರುತ್ತೋ ಅವತ್ತೇ ಸ್ನೇಹದ ಒಂದೊಂದೇ ಮೆಟ್ಟಿಲು ಕುಸಿಯುತ್ತ ಬರುತ್ತೆ. ಹೊಂದಾಣಿಕೆ ಮಾಡಿಕೊಳ್ಳೋಣಾ ಅಂತಾ ಬಹಳ ಕಾಯ್ತೇವೆ. ಆದ್ರೆ ಅದಕ್ಕೊಂದು ಮಿತಿ ಇರುತ್ತಲ್ಲಾ. ನಾವು ಹೊಂದಾಣಿಕೆ ಮಾಡಿಕೊಂಡಷ್ಟು ಆ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರದಿದ್ದಾಗ ಎಷ್ಟು ಅಂತಾ ಕಾಯೋದಕ್ಕೆ ಸಾಧ್ಯ. ಅವನೂ ಯಾವುದೋ ಒತ್ತಡಕ್ಕೆ ಬಿದ್ದಿದ್ದಾನೆ. ಹಾಗೆ ಮಾಡ್ತಿದ್ದಾನೆ ಅಂತಾ ಗೊತ್ತಿದ್ರೂ ನಮಗೆ ದೂರ ಹೋಗೋದು ಅನಿವಾರ್ಯ ಆಗ್ಬಿಟ್ಟಿರುತ್ತೆ.  ನಿಧಾನವಾಗಿ ಮಾತನಾಡುವುದು-ಓಡಾಡುವುದು ಕಡಿಮೆಯಾಗುತ್ತೆ. ಕೊನೆಗೊಂದು ದಿನ ಪೂರ್ಣವಿರಾಮ, ಮೊಬೈಲ್ ನಲ್ಲಿ ನಂಬರ್ ಡಿಲೀಟ್. ಇನ್ ಬಾಕ್ಸ್ ನಲ್ಲಿರೋ ಅವನು ಕಳುಸಿದ ಹಳೆ ಮೆಸೇಜ್ ಗಳೇ ಆತನ ನೆನಪಿಗೆ ಇರೋ ಸಾಧನಗಳಾಗಿಬಿಡ್ತವೆ.

ಆದ್ರೆ ಇಷ್ಟೆಲ್ಲಾ ಮಾಡೋವಾಗ ಮನಸ್ಸಲ್ಲಿ ಖುಷಿ ಇರುತ್ತೆ ಅಂದ್ಕೊಂಡ್ಯಾ, ಆ ಸಮಯದಲ್ಲಿನ ವೇದನೆ ಹಲ್ಲು ನೋವಿನಂತದ್ದು. ಅದು ಬೇರೆಯವರಿಗೆ  ಕಾಣಿಸೋದಿಲ್ಲ. ಒಳಗೊಳಗೇ ನೋಯುವುದು ತಪ್ಪೋದಿಲ್ಲ. ನಮ್ಮ ತಪ್ಪು ಇಲ್ಲದಿದ್ದರೂ ನಾನೇ ತಪ್ಪು ಮಾಡಿದೆನಾ ಅನ್ನೋ ಪ್ರಶ್ನೆ ಸದಾ ಕೊರೆಯುತ್ತಿರುತ್ತೆ. ಒಂದು ರೀತಿಯ ವಿಷಾದ ಮನೆಮಾಡಿರುತ್ತೆ. ಒಟ್ಟಿನಲ್ಲಿ ಸ್ನೇಹಿತನನ್ನು ಸಂಪಾದಿಸೋದು ಕಷ್ಟ ಅಂತಾ ಜಗತ್ತು ಅಂದ್ಕೊಂಡಿದ್ರೆ ಕೆಲವೊಮ್ಮೆ ನಮಗೆ ಅವರನ್ನು ಕಳೆದುಕೊಳ್ಳೋದೂ ಎಷ್ಟೊಂದು ಕಷ್ಟ ಅನ್ನಿಸಿಬಿಡುತ್ತೆ ಇಷ್ಟು ಹೇಳಿ ನನ್ನ ಮಾತು ಮುಗಿಸಿದೆ. 

ನಮಗೆ ನೋವಾದ್ರೆ ಗುಣ ಪಡಿಸೋದಕ್ಕೆ ಸ್ನೇಹ, ಪ್ರೀತಿ ಅನ್ನೋ ಮೆಡಿಸಿನ್ ಇರುತ್ತೆ. ಆದ್ರೆ ಸ್ನೇಹ, ಪ್ರೀತಿಗೇ ಗಾಯ ಆದ್ರೆ ಅದಕ್ಕೆ ಮೆಡಿಸಿನ್ ಇಲ್ಲಾ ಅಲ್ವಾ ಅನ್ನೋದು ಅವನ ಪ್ರಶ್ನೆಯಾಗಿತ್ತು.

2 comments:

  1. ಅಶ್ವತ್ಥ್,
    ನಿಜವಾಗಿಯೂ ಯೋಚಿಸಲೇಬೆಕಾದ ವಿಷಯ. ನನಗೂ ಕೂಡ ಒಮ್ಮೊಮ್ಮೆ ಹೀಗೆ ಅನ್ನಿಸಿದ್ದಿದೆ.

    ReplyDelete
  2. hey brother, nice article....really no one can imagine the pain of leaving a best friend/friendship.

    ReplyDelete