Tuesday, June 19, 2012

ಮನಸ್ಸು ಭಾರವಾದಾಗ ಮತ್ತೆ ಮೂಡಿತು ಅಕ್ಷರ

 -   ಅಶ್ವತ್ಥ ಕೋಡಗದ್ದೆ
ಒಂದು ಚಿಕ್ಕ ಆಲಸಿತನ ಒಂದು ವರ್ಷ ಸುಮ್ಮನೆ ಕುಳ್ಳಿರಿಸಿತು ಅಂದ್ರೆ ನನಗೇ ನಂಬೋದಕ್ಕೇ ಆಗ್ತಿಲ್ಲ. ಬರವಣಿಗೆಯೇ ಉದ್ಯೋಗ, ಅನ್ನ, ಜೀವನ ಎಲ್ಲಾ ಅಂದುಕೊಂಡವನು. ಆದರೆ ಅದನ್ನೇ ದೂರ ಮಾಡಿಕೊಂಡಿದ್ದೇ ಅಂದ್ರೆ ಅದಿನ್ನೆಷ್ಟು ಆಲಸಿಯಾಗಿದ್ದೆ ಅಂತಾ ಇವತ್ತು ಯೋಚನೆ ಮಾಡ್ತಾ ಇದ್ದೆ. ಒಂದು ವರ್ಷದಲ್ಲಿ ಏನೆಲ್ಲಾ ಆಗಿಹೋಯ್ತು, ಯಡಿಯೂರಪ್ಪ ಖುರ್ಚಿ ಕಳಕೊಂಡ್ರು, ಸದಾನಂದ ಗೌಡ್ರು ನಗುನಗುತಾ ಬಂದು ಕುಳಿತುಕೊಂಡ್ರು, ಆಚಾರ್ಯ ರಾಜಕೀಯ ಅಷ್ಟೇ ಅಲ್ಲ, ಜೀವನವೇ ಸಾಕಪ್ಪ ಅಂತಾ ಹೋಗ್ಬಿಟ್ರು.... ಬಳ್ಳಾರಿ ಸಾಮ್ರಾಜ್ಯ ನೆಲಸಮ ಆಯ್ತು, ರೆಡ್ಡಿ ಜೈಲಿಗೆ ಹೋದ್ರು. ಅಯ್ಯೋ ಮತ್ತೆ ಇಲ್ಲೂ ರಾಜಕೀಯನೇ ಆಗ್ಬಿಡ್ತು.

ಇನ್ನು ನನ್ನ ಬಗ್ಗೆ ಹೇಳ್ಬೇಕು ಅಂದ್ರೆ ಬೆಂಗಳೂರಿಗೆ ಬೈ ಬೈ ಹೇಳಿ ದಾವಣಗೆರೆಗೆ ಹೋಗೋದು ಬಹುತೇಕ ಖಚಿತವಾಯ್ತು. ಕೊನೆ ಹಂತದಲ್ಲಿ ಅದು ಕೈತಪ್ಪಿ ಇಲ್ಲೇ ಉಳ್ಕೊಂಡೆ. ನನ್ನ ಹಳೆಯ ಆಫೀಸ್ ನಲ್ಲಿ ಅದೇನೇನೋ ಬದಲಾವಣೆಗಳಾದ್ವು, ಸಾಕಪ್ಪಾ ಅಂತಾ ಕೈಕುಡುಗಿ ಎದ್ದುಬಿಟ್ಟೆ. ಹೊಸ ಆಫೀಸ್ ಗೆ ಬಂದೆ. ಹಾಗೂ, ಹೀಗೂ ಅಡ್ಜೆಸ್ಟ್ ಆಗಿಬಿಟ್ಟೆ.. 

ಅಷ್ಟರಲ್ಲೇ ಅಪ್ಪಯ್ಯ ಆರಾಮಿಲ್ಲದೇ ಮಲಗಿದ್ರು, ಮೊದಲಿನ ಹಾಗೇ  ಓಡಾಡೋಕೆ ಒಂದು ತಿಂಗಳೇ ಬೇಕಾಯ್ತು. ನಡುವೆನೇ ಕಳೆದ ವರ್ಷದಲ್ಲಿ ಒಂದಷ್ಟು ಖುಷಿ ಜೊತೆ ಕೆಲ ಬೇಜಾರಗಳೂ ಹೆಗಲೇರಿ ಕುಂತ್ವು. ಹೈಸ್ಕೂಲ್ ನಿಂದ ಡಿಗ್ರಿ ತನಕ ಜೊತೆಗೆ ಓದಿದ್ದ ನಾಗೇಂದ್ರ ಆಕ್ಸಿಡೆಂಟ್ ನಲ್ಲಿ ತೀರ್ಕೊಂಡು ಬಿಟ್ಟ. ಒಬ್ಬರ ಹತ್ರಾನೂ  ದೊಡ್ಡಕ್ಕೆ ಮಾತನಾಡದ, ಯಾರಿಗೂ ಕೆಟ್ಟದ್ದು ಮಾಡದ ಅವ್ನು ಇಷ್ಟು ಬೇಗ ಹೋಗ್ಬಿಟ್ನಾ ಅಂತಾ ಆಶ್ಚರ್ಯ ಆಗ್ತಿದೆ. ಜವರಾಯನೇನು ಒಳ್ಳೆಯವರು, ಕೆಟ್ಟವರು ಅಂತಾ ಬೇರೆ ಮಾಡಿ ನೋಡ್ತಾನಾ..

ಒಂದು ವರ್ಷದಲ್ಲಿ ಏನೇನೋ ನಡೆದುಹೋಯ್ತು... ಬರಿತಾ ಕುತ್ಗೊಂಡಿದ್ರೆ ಏನೆಲ್ಲಾ ಬರೀಬಹುದಿತ್ತು. ಆದ್ರೆ ಸುಮ್ನೆ ಕುತ್ಗೊಂಡು ಬಿಟ್ಟೆ. ಬರೀ ಮೊಬೈಲ್, ಫೆಸ್ಬುಕ್, ಕ್ರಿಕೆಟ್, ಸಿನಿಮಾ, ಸುತ್ತಾಟ ಅಂತಾ ಕಾಲ ಕಳೆದೆ. ನಮ್ಮ ಹಳ್ಳಿಹುಡುಗ್ರು ಬ್ಲಾಗ್ ಪ್ರತಿ ದಿನ ಅಣಕಿಸ್ತಿತು. ಕಳೆದ ವರ್ಷ ಜೂನ್ 7 ಕ್ಕೆ ಬರೆದ ಲೇಖನವೇ ಲಾಸ್ಟ್. ಕಡೆಗೆ ಒಂದಕ್ಷರ ಬರೆದಿರಲಿಲ್ಲ. ಬ್ಲಾಗ್ ಅಪ್ಡೇಟ್ ಮಾಡ್ರೋ ಅಂತಾ 'ನನ್ನೊಳಗಿನ ಕನಸು ವೆಂಕಟೇಶ್ ಹೇಳಿದ್ದ. ಹುಂ ಅಂತಾ ಹೇಳಿ ಸುಮ್ನಾಗಿಬಿಟ್ಟಿದ್ದೆ.

ಮನಸ್ಸಲ್ಲಿ ಬೇಸರ, ನೋವೆಂಬುದು ಕಲ್ಲಾದಾಗ ಅಕ್ಷರ ಕಡೆಯೋದು ನನ್ನ ಜಾಯಮಾನ. ಅದು ಮತ್ತೊಮ್ಮೆ ಹೌದು ಅಂತಾ ಸಾಭೀತಾಗಿದೆ. ಎದೆಯಲ್ಲಿ ನೋವೆಂಬ ಹುತ್ತ ಕಟ್ಟಿ ಬೆಳೀತಿದೆ. ಅಕ್ಷರವೂ ಒಡಮೂಡ್ತಿದೆ. ಮತ್ತೆ ಬರೆಯೋದಕ್ಕೆ ಕೂತಿದ್ದೇನೆ. ಈ ವಿಷಯದಲ್ಲಿ ಅವಳಿಗೆ ನಾನು ಥ್ಯಾಂಕ್ಸ್ ಹೇಳ್ಲಾ.. ಥ್ಯಾಕ್ಸ್ ಹೇಳಿದ್ರೂ ಅವಳು ಅದನ್ನು ಸ್ವೀಕರಿಸಲ್ವಲ್ಲಾ.....

4 comments:

  1. ತುಂಬಾ ಕುಶಿ ಆತು ಅಶ್ವಥ್ ...ಮನಸ್ಸಿನ ಎಲ್ಲ ಬಾವನೆಗಳನ್ನು ಅಕ್ಷರವಾಗಿಸಿದರೆ ಜೀವನ ಸುಂದರ ವಾಗಿರ್ತು ಅಂತ ಎನ್ನ ಬಾವನೆ ..ಅದು ಕುಶಿಯ ಕ್ಷಣಗಳೇ ಇರ್ಲಿ ಅಥವ ಬೇಜಾರೆ ಇರ್ಲಿ ಅದನ್ನ ಎಲ್ಲರ ಜೊತೆ ಹಂಚಿಕೊಂಡರೆ ಮತ್ತೂ ಮನಸ್ಸು ಕುಶಿಯಾಗಿ ಇರ್ತು ..ಬರೀ ಕೆಲಸ , ಮನೆ , ದುಡ್ಡು ಅಂತ ಯಾಂತ್ರಿಕ ಬದುಕು ನಮಗೆ ಬೇಕಾ ? ಉಳಿದ ಹಳ್ಳಿ ಹುಡುಗರಿಗೂ ಈ ಮಾತು ... ಮುಂದೆ ಬರಿತಾ ಇರಿ ... ಹೇಳಿ ಎನ್ನ ಆಶಯ ..

    ReplyDelete
  2. ಮನಸಿಗೆ ನೋವು ತಡ್ಯಲೇ ಆಗದೆ ಅಕ್ಷರ ರೂಪಕ್ಕೆ ಬಂತು ಅಂದ್ರೆ ನೋವು ಸಣ್ಣದಲ್ಲ....! ಕೈ ಕುಡುಗಿ ಏಳಬೇಕಷ್ಟೇ ಈ ವಿಷಯದಲ್ಲೂ....

    ReplyDelete
  3. ಕೆಲವು ನೋವಿನ ನೆನಪುಗಳನ್ನು ಮರೆಯಲಾಗದು..ನಿಜ. ಜೀವನದ ಮಜಲುಗಳನ್ನು ದಾಟುವಾಗ ಹುತ್ತವಾಗುವ ನೋವಿನ ನೆನಪುಗಳನ್ನು ಕಿತ್ತು ಮಾಸುವ ಹಾಗೆ ಮಾಡುವುದು ಅನಿವಾರ್ಯ.

    ಶುಭವಾಗಲಿ.

    ReplyDelete
  4. ಮನಸ್ಸೊಳಗಿನ ನೋವೋ, ಭಾವವೋ ತೀರಾ ತಡೆಯಲಾಗದಿದ್ದಾಗ ಅದು ಕವನವಾಗೋ, ಲೇಖನವಾಗೋ ಹೊರಹೊಮ್ಮೋದುಂಟು.. ಮನಸ್ಸಿನ ತಡೆಗೋಡೆ ತಡೆಯದಿದ್ದಾಗ ಭಾವಪ್ರವಾಹ ಪದಗಳಾಗಿ ಹೊರಹೊಮ್ಮೋದುಂಟು.. ಬರೆದ ವಿಷಯ ಓದಿ ಬೇಜಾರಾದ್ರೂ ವರ್ಷದ ನಂತರ ಆದ್ರೂ ಮತ್ತೆ ಬರದಿದ್ದು ಓದಕ್ಕೆ ಖುಷಿ ಆಗ್ತಾ ಇದ್ದು :-)

    ReplyDelete