Thursday, September 13, 2012

ಮನುಷ್ಯನಿಗೆ ವಯಸ್ಸಾಗಬಾರದು…. ಯಾಕೆಂದ್ರೆ…


-      ಅಶ್ವತ್ಥ ಕೋಡಗದ್ದೆ
`ಮನುಷ್ಯರಿಗೆ ವಯಸ್ಸೇ ಆಗ್ಬಾರ್ದು. ಅದರಲ್ಲೂ ನಾವು ಹತ್ತಿರದಿಂದ ನೋಡಿದವರು, ನಮ್ಮ ಪ್ರೀತಿ ಪಾತ್ರರು ಅನಿಸಿಕೊಂಡವರಿಗೆ ವಯಸ್ಸೇ ಆಗ್ಬಾರ್ದು ನೋಡಿ. ಅವರು ಯಾವಾಗ್ಲೂ ಗಟ್ಟಿಮುಟ್ಟಾಗಿ ಲವಲವಿಕೆಯಿಂದ ಇರ್ಬೇಕು. ನಾವು ತಪ್ಪು ಮಾಡಿದ್ರೆ ಗದರಿಸ್ಬೇಕು. ಒಳ್ಳೇದು ಮಾಡಿದ್ರೆ ಬೆನ್ನು ತಟ್ಟಬೇಕು.  ಇನ್ನು ನಮಗೆ ಕಲಿಸಿದ ಶಿಕ್ಷಕರಿರ್ತಾರಲ್ಲ, ಅವರಿಗಂತೂ ವಯಸ್ಸೇ ಆಗ್ಬಾರ್ದು ಅನ್ಸುತ್ತೆ. ನಾವು ಶಾಲೆಗೆ ಹೋಗ್ತಾ ಇರ್ಬೇಕಾದ್ರೆ ಅವರು ಎಷ್ಟು ಖುಷಿಖುಷಿಯಲ್ಲಿ ಓಡಾಡ್ತಾ ಇರ್ತಿದ್ರು. ಆದ್ರೆ ಈಗ ಕೆಲ ವರ್ಷದ ನಂತ್ರ ಅವರನ್ನು ನೋಡ್ತಿದ್ರೆ ಕಣ್ಣಲ್ಲಿ ನೀರು ಬರುತ್ತೆ. ಆಗ ಬರೀ ಒಂದು ಕಣ್ಸನ್ನೆಯಲ್ಲಿ ನಮ್ಮನ್ನು ಹಿಡಿತದಲ್ಲಿ ಇಡ್ಡುಕೊಂಡವರು ಅವರು. ನಮ್ಮನ್ನು ತಿದ್ದಿದವರು. ಆದ್ರೆ ಇವತ್ತು ಅದೇ ಕಣ್ಣು ಮಂಜಾಗಿದೆ. ಕಣ್ಣೊಳಗಿನ ಭಾವವನ್ನು ಗುರುತಿಸೋಣ ಅಂದ್ರೆ ಅವರು ಹಾಕಿಕೊಂಡಿರೋ ಕನ್ನಡಕ ಮರೆಮಾಡ್ತಿದೆ. ದೇವರು ನಿಜಕ್ಕೂ ಕೆಟ್ಟವನು…’ ಹೀಗೆ ನಟ ಕಿಚ್ಚ ಸುದೀಪ್ ಟಿ ವಿ ಇಂಟರ್ವ್ಯೂ ಒಂದರಲ್ಲಿ ತಮ್ಮದೇ ಟಿಪಿಕಲ್ ಸ್ಟೈಲ್ ನಲ್ಲಿ ಹೇಳ್ತಾ ಇದ್ರು. ಅವರ ಮನಸ್ಸಿನ ವೇದನೆ ಆಚೆ ಬರೋದಕ್ಕೂ ಆಗದೇ, ಒಳಗೆ ಇರೋದಕ್ಕೂ ಆಗದೇ ತೊಳಲಾಡ್ತಿತ್ತು. ತಮ್ಮ ಹೈಸ್ಕೂಲ್ ಟೈಂನ ಶಿಕ್ಷಕಿಯೊಬ್ಬರನ್ನು ನೆನೆದು ಅವರು ಮರುಗ್ತಿದ್ರು.

ಸುದೀಪ್ ಮಾತು ಕೇಳ್ತಿದ್ದಂತೆ ನನಗೆ ಕಣ್ಮುಂದೆ ಬಂದಿದ್ದು ನನ್ನ ನಾಣಿಕಟ್ಟಾ ಹೈಸ್ಕೂಲ್ ನ ಇಂಗ್ಲೀಷ್ ಮೇಡಂ ನೆನಪು. ಬಿಟ್ಟೂ ಬಿಡದೇ ಸುಮಾರು 2 ದಿನ ನನ್ನನ್ನು ಅವರ ನೆನಪು ಕಾಡ್ತಾನೇ ಇತ್ತು. ಸುಮಾರು 12-13 ವರ್ಷದ ಹಿಂದೆ ನಾನು ನಾಣಿಕಟ್ಟಾ ಹೈಸ್ಕೂಲ್ನಲ್ಲಿ ಓದಿದವನು. ಅಲ್ಲಿ ಆಗ ಇಂಗ್ಲಿಷ್ ಹೇಳಿಕೊಡ್ತಾ ಇದ್ದಿದ್ದು ಸಾವಿತ್ರಿ ಧಾರೇಶ್ವರ. ಅವರಂದ್ರೆ ಸ್ವಲ್ಪ ಮಟ್ಟಿಗೆ ಎಲ್ಲರಿಗೂ ಹೆದ್ರಿಕೆನೇ. ಆಗ ಇಂಗ್ಲಿಷ್ ಪದ್ಯ ಬಾಯಿಪಾಠ ಹಾಕ್ಬೇಕಿತ್ತು. ಬಂದಿಲ್ಲ ಅಂದ್ರೆ ಹೊಡಿತಾರೆ ಅನ್ನೋದು ಯೆಲ್ಲರಿಗೂ ಭಯ.

ಇಂಗ್ಲಿಷ್ ಮೇಡಂ ಹೊಡೆಯೋದಕ್ಕೂ ಅವರದ್ದೇ ಆದ ಟಿಪಿಕಲ್ ಸ್ಟೈಲ್ ಇತ್ತು. ಅವರು ಬರೆಯೋದಕ್ಕೆ, ಹೊಡೆಯೋದಕ್ಕೆ ಬಳಸ್ತಿದ್ದದ್ದು ಎಡಗೈಯನ್ನು. ನಿಧಾನವಾಗಿ ತಮ್ಮ ಎಡಗೈಗೆ ಕಟ್ಟಿದ್ದ ವಾಚನ್ನು ಬಿಚ್ಚಿದ್ರು ಅಂದ್ರೆ ಯಾರಿಗೋ ಇದೆ ಗ್ರಹಚಾರ ಅಂತಾನೇ ಅರ್ಥ. ವಾಚು ಬಿಚ್ಚಿ ಕೆನ್ನೆ ಮೇಲೆ  ಹೊಡೆತ ಬಿತ್ತು ಅಂದ್ರೆ ಎಂತವನೂ ಒಮ್ಮೆ ಅದುರಿ ಹೋಗಬೇಕು. ಹಾಗಿರ್ತಿತ್ತು ಪೆಟ್ಟು. ಜೊತೆಗೆ `ಮಂಗ್ಯಾಲಾ’ ಬಯ್ಯೋದೂ ಇರ್ತಿತ್ತು. ನಾನೂ ಒಂದು ಬಾರಿ ಹೊಡೆತ ತಿಂದವನು. ಆಗಲ್ಲಾ ನಾವು ಯಾಕಾದ್ರೂ ಹೊಡಿತಾರೋ ಅಂತಾ ಬೈಕೊಳ್ತಿದ್ವಿ.

ಹೈಸ್ಕೂಲೆಲ್ಲಾ ಮುಗಿದು ಸುಮಾರು ವರ್ಷ ಆಗ್ಬಿಟ್ಟಿತ್ತು. ಈಟಿವಿ ಅಂತಾ ನಾನು ಹೈದರಾಬಾದ್ ಗೆ ಹೋಗ್ಬಿಟ್ಟೆ.. ಅಲ್ಲಿಂದಾ ಒಮ್ಮೆ ಮನೆಗೆ ಬಂದಾಗ ನಾಣಿಕಟ್ಟಾ ಬಸ್ ಸ್ಟ್ಯಾಂಡ್ ನಲ್ಲಿ ಇಂಗ್ಲೀಷ್ ಮೇಡಂ ಕಂಡ್ರು. ಶರೀರ ಕುಗ್ಗಿತ್ತು. ಕಣ್ಣು ಮೊದಲಿನ ಹೊಳಪು ಕಳೆದುಕೊಂಡಿತ್ತು. ತಲೆಗೆ ಒಂದು ಸ್ಕಾರ್ಫ್ ಕಟ್ಟಿದ್ರು. ಯಾಕೋ ಬಹಳ ಬಳಲಿದಂತೆ ಕಾಣ್ತಿದ್ರು. ಮೆಡಂ ನಮಸ್ಕಾರ,  ಚೆನ್ನಾಗಿದ್ದೀರಾ..? ಅಂತಾ ಕೇಳ್ದೆ. ನಾನು ಓದಿ ಹೋದ ನಂತ್ರ  ಅದೆಷ್ಟು ಬ್ಯಾಚ್ ಬಂದು ಹೋಯ್ತೋ, ಎಷ್ಟು ಹುಡುಗರು ಬಂದು ಹೋದ್ರೋ. ಆದ್ರೆ ಅವರು ನನ್ನ ಹೆಸರನ್ನೂ ನೆನಪಿಟ್ಕೊಂಡಿದ್ರು. ಅಶ್ವತ್ಥ ನಾ ಚೆನ್ನಾಗಿದೀನಿ, ನೀ ಹೇಗಿದೀಯಾ, ಏನ್ ಮಾಡ್ತಿದೀಯಾ ಅಂತೆಲ್ಲಾ ಕೇಳಿದ್ರು. ಸುಮಾರು ಹೊತ್ತು ಮಾತಾಡಿದ್ರು. ಆದ್ರೂ ನನಗೆ ಅವರಲ್ಲಿ ಮೊದಲಿನ ಇಂಗ್ಲಿಷ್ ಮೇಡಂ ನಲ್ಲಿದ್ದ ಖದರ್ ಕಾಣ್ಲಿಲ್ಲ. ಮನೆಗೆ ಬಂದು ತಂಗಿ ಹತ್ರಾ ಇಂಗ್ಲಿಷ್ ಮೇಡಂ ಸಿಕ್ಕಿದ್ರು ಅಂತಾ ಹೇಳಿದಾಗ ಅವಳು ಹೇಳಿದ್ಲು ` ಮೇಡಂಗೆ ಪಾಪ ಕ್ಯಾನ್ಸರ್ ಅಂತೆ’

ಮೂರು ವರ್ಷದ ಹಿಂದೆ ಅವರು ತೀರಿಕೊಂಡ್ರಂತೆ ಅನ್ನಿಸಿದಾಗ ಯಾಕೋ ತುಂಬಾನೇ ಬೇಜಾರಾಯ್ತು. ಅವರದ್ದೇನು ಸಾಯೋ ವಯಸ್ಸಾ..? ಬರೀ 45-48 ವರ್ಷ ಆಗಿರ್ಬೇಕು ಅಷ್ಟೇ. ಪಾಪ ಎಷ್ಟು ಮುಂಚೆ ಹೋಗ್ಬಿಟ್ರು. ಮೊನ್ನೆ ಸುದೀಪ್ ಮಾತಾಡಿದಾಗ್ಲೂ ನನಗೆ ನೆನಪಾಗಿದ್ದು ಇದೇ, ದೇವರು ಕೆಲವೊಮ್ಮೆ ಕ್ರೂರಿ ಅನ್ನಿಸಿಬಿಡ್ತಾನೆ ಅಂತಾ.

ಮೇಸ್ಟರಿಗೆ ವಯಸ್ಸೇ ಆಗ್ಬಾರ್ದು ಅನ್ನೋ ಸುದೀಪ್ ಮಾತು ಮತ್ತೆ ಮತ್ತೆ ನೆನಪಾಗ್ತಿದೆ. ನಾಣಿಕಟ್ಟಾ ಹೈಸ್ಕೂಲ್ ನಲ್ಲಿದ ಪಿ ಆರ್ ಭಟ್ ಸರ್ ಎಲ್ಲಿದಾರೋ ಹ್ಯಾಗಿದಾರೋ ಗೊತ್ತಿಲ್ಲ. ಕನ್ನಡ ಮೇಡಂ ಯಾವ ಶಾಲೆಯಲ್ಲಿ ಕಲಿಸ್ತಿದ್ದಾರೋ. ಸತೀಶ್ ಯಲ್ಲಾಪುರ ಸರ್  ಬಿಡಿಸೋ ಕಾರ್ಟೂನ್ ಯಾಕೋ ಪತ್ರಿಕೆಗಳಲ್ಲಿ ಹೆಚ್ಚಹೆಚ್ಚು  ಬರ್ತಾ ಇಲ್ಲ. ಆದ್ರೆ ಅವರು ಯಲ್ಲಾಪುರದ ಬಿಸ್ಗೋಡಲ್ಲಿ ಇದಾರಂತೆ. ಮೊನ್ನೆ ಮೊನ್ನೆ ಸಿಕ್ಕಿದಾಗ ಅವರಲ್ಲಿ ಕಂಡಿದ್ದು ಮೊದಲಿನದ್ದೇ ಪ್ರೀತಿಯ ಮಾತು. ಎಸ್ ಎಸ್ ಹೆಗಡೆ ಸರ್ ಈಗ ಪಿಯು ಲೆಕ್ಚರ್. ಕಲಗದ್ದೆ ಕನ್ನಡ ಶಾಲೆಯಲ್ಲಿದ್ದ ಪಟಗಚ್ಚೆ ಅಕ್ಕೋರು ಯಾವುರಲ್ಲಿದಾರೋ ಗೊತ್ತಿಲ್ಲ. ಇನ್ನು ಉಂಚಳ್ಳಿ ಶಾಲೆಯಲ್ಲಿ ನನಗೆ ಮತ್ತು ಗೆಳೆಯ ನವೀನ್ ಭಟ್ ನಿಗೆ ಮಾತ್ರ ಚಾಕಲೇಟ್ ಕೊಡ್ತಿದ್ದ ಶಾರದಕ್ಕೋರು ಏನ್ ಮಾಡ್ತಿದ್ದಾರೋ ಏನೋ… ಎಲ್ಲಾದ್ರೂ ಇರಲಿ. ಎಲ್ಲರೂ ಆರಾಂ ಆಗಿರಲಿ, ನೆಮ್ಮದಿಯಿಂದಿರಲಿ.

2 comments:

  1. ಹಳೆಯ ನೆನಪು ಹಸಿಮಾಡಿದ್ಯೋ ದೋಸ್ತಾ.. ಶಾರಾದಕ್ಕೋರು, ಪ್ರತಿಭಕ್ಕೋರು,ರುಕ್ಮಕ್ಕೊರು,ಗೀತಕ್ಕೋರು ಎಲ್ಲರದ್ದೂ.. ಈಗೊಂದು 6 ವರ್ಷದ ಹಿಂದಿನವರೆಗೂ ಶಾರದಕ್ಕೊರನ್ನ ಮಾರಿ ಗುಡಿಯ ಹತ್ತಿರದ ಮನೆಯಲ್ಲಿ ನೋಡಿದ್ದು ನೆನಪಿದ್ದು.. ಉಳಿದೋರೆಲ್ಲ ಆರಾಮಾಗಿದ್ದ.. ಈ ಸಲ ಊರಿಗೆ ಹೋದಾಗ ಶಾರದಕ್ಕೋರ ಮನೆಗೆ ಹೋಗ್ ಬರ್ತಿ..

    ReplyDelete
  2. ಹೌದು.. ಪ್ರೀತಿ ಪಾತ್ರರಿಗೆ ವಯಸ್ಸಾಗ್ಲಾಗ.. :-( ಓದಕ್ಕಿದ್ರೆ ಕಣ್ಣಿಗೆ ಕಟ್ಟಿದಂಗೆ ಆತು :-(

    ReplyDelete