Thursday, November 4, 2010

ಬೂರುಗಳುವು ತಂದಿಟ್ಟ ಪಜೀತಿ....


- ಅಶ್ವತ್ಥ ಕೋಡಗದ್ದೆ

'ನನ್ನ ಬೈಕನ್ನೇ ಕದಿಯೋವಷ್ಟು ಧೈರ್ಯ ಬಂದ್ಬುಡ್ತಾ ನಮ್ಮೂರಲ್ಲಿ. ಸುಮ್ನೆ ಬಿಡ್ತಿನ್ನೆ ನಾನು. ಪೊಲೀಸ್ ಕಂಪ್ಲೇಂಟ್ ಕೊಡ್ತಿ. ಎಲ್ಲರಿಗೂ ಬುದ್ದಿ ಕಲಿಸ್ತಿ'. ಹಾಗಂತ ರಾಮಚಂದ್ರಣ್ಣಯ್ಯ ಒಂದೇ ಸಮನೆ ಬೊಬ್ಬೆ ಹಾಕ್ದಿದ್ದ. ಊರವರೆಲ್ಲಾ ಏನಾಗ್ಬಿಡ್ತೆನೋ ಅನ್ನೋ ಹಾಗೆ ಅಂಗಳದಂಚಿಗೆ ಬಂದು ನಿಂತುಕೊಂಡು ನೋಡ್ತಾ ಇದ್ರು. ಜನ ಹೆಚ್ಚು ಸೇರಿದಂತೆ ರಾಮಚಂದ್ರಣ್ಣಯ್ಯನ ಕೂಗು ಜೋರಾಗ್ತಾನೇ ಇತ್ತು. ದೀಪಾವಳಿ ಹಬ್ಬನೇ ಅವನ ಮೈಮೇಲೆ ಬಂದಂತಿತ್ತು. 


ಊರಲ್ಲೇ ಹಿರಿಕನಾಗಿದ್ದ ನನ್ನ ದೊಡ್ಡಪ್ಪ ನಿಧಾನವಾಗಿ ರಾಮಚಂದ್ರಣ್ಣನ ಹತ್ತಿರ ಹೋಗಿ ಸಮಾಧಾನ ಮಾಡ್ತಿದ್ದ. 'ಏನು ಆಯ್ದಿಲ್ಲೆ ರಾಮಚಂದ್ರಾ. ಇಲ್ಲೆ ಎಲ್ಲೋ ಇರ್ತು. ಎಲ್ಲರೂ ಸೇರಿ ಹುಡ್ಕನ. ಸಿಕ್ಕಿದ್ದಿಲ್ಲೆ ಹೇಳಾದ್ರೆ ನಂತ್ರ ಪೊಲೀಸು-ಗಿಲೀಸು ನೋಡ್ಕ್ಯಂಡ್ರಾತು. ನೀನ್ಯಾಕೆ ಕೂಗಾಡ್ತೆ. ಯಾರೋ ಊರು ಹುಡುಗ್ರು ತಮಾಷೆಗೆ ಹಾಗೆ ಮಾಡಿರವು'. ಹೀಗೆ ಹೇಳ್ತಾ ಅವನನ್ನಾ ಸಮಾಧಾನ ಮಾಡ್ಲಿಕೆ ನೋಡ್ತಿದ್ದಾ. ಆದ್ರೆ ರಾಮಚಂದ್ರಣ್ಣಯ್ಯ ಹೇಳಿದ್ದನ್ನೇ ಕೇಳ್ತಿರಲಿಲ್ಲ.

'ಅಲ್ಲಾ ನೀನೇ ಹೇಳು ಮಾಬ್ಲೇಶ್ವರಣ್ಣ, ಮನೆ ಮುಂದೆ ನಿಲ್ಲಿಸಿದ್ದ ಬೈಕ್. ರಾತ್ರಿ ಬಳಗಾಗೋದ್ರೊಳಗೆ ಕಾಣ್ತಿಲ್ಲೆ ಅಂದ್ರೆ ಏನರ್ಥ. ಅದೂ ಊರಲ್ಲಿ ಯಾರ ಬೈಕೂ ಇಲ್ದೇ ನನ್ನ ಬೈಕನ್ನೇ ಕದ್ದಿದ್ದ ಅಂದ್ರೆ ನನ್ನ ಮೇಲೆ ಅವ್ಕೆ ಏನ್ ದ್ವೇಷ ಇದ್ದಿಕ್ಕು. ನಾನು ಹಬ್ಬ ಮಾಡ್ಲಾ, ಇಲ್ಲೆ ಬೈಕ್ ಹುಡುಕ್ಯೋತ ಕುತ್ಗಳ್ಳಲಾ. ನಾನು ಸುಮ್ನೆ ಬಿಡ್ತ್ನಿಲ್ಲೆ....' ಜೋರಾಗಿತ್ತು ರಾಮಚಂದ್ರಣ್ಣಯ್ಯನ ಆರ್ಭಟ.

ಇದನ್ನೆಲ್ಲಾ ನೋಡ್ತಿದ್ದಾ ನಮಗೆ ಒಂದು ಕಡೆ ಮಜಾ. ಮತ್ತೊಂದು ಕಡೆ ಎದೆಯಲ್ಲಿ ಪುಕುಪುಕು. ಎಲ್ಲಾದ್ರೂ ಪೊಲೀಸ್ ಕಂಪ್ಲೇಂಟ್ ಅಂತಾ ಹೋಗ್ಬಿಟ್ರೆ ಅಂತಾ. ಯಾಕಂದ್ರೆ ಆ ಬೈಕ್ ಹುಗಿಸಿಟ್ಟವರು ನಾವೇ ಆಗಿದ್ವಿ...!

ಯೆಷ್ಟಂದ್ರೂ ದೀಪಾವಳಿ ಅಲ್ವಾ. ಬೂರುಗಳವು ಮಾಡ್ಬೇಕು ಅನ್ನೋ ಉಮೇದಿ ಬಂದ್ಬಿಟ್ಟಿತ್ತು. ಪ್ರತಿವರ್ಷದಂತೆ ಅದೇನು ಎಳೆನೀರು ಇಳಿಸಿ ಕುಡಿಯೋದು. ಯೇನಾದ್ರೂ ಸ್ವಲ್ಪ ಡಿಫರೆಂಟಾಗಿರ್ಲಿ ಅಂತಾ ಆಲೋಚ್ನೆ ಮಾಡ್ತಿದ್ದಾಗ ನಮ್ಮ ನಾಲ್ಕಾರು ಮಂದಿ ಟೋಳಿಯಲ್ಲಿ ಒಬ್ಬನಾದ ರಾಘಣ್ಣ  ಕೊಟ್ಟ ಐಡಿಯಾ ಇದು. 'ಈ ವರ್ಷ ರಾಮಚಂದ್ರಣ್ಣಯ್ಯನ ಬೈಕನ್ನಾ ಅಡಗಿಸಿ ಇಟ್ಬುಡಣ. ಬೆಳಗ್ಗೆ ಹುಡುಕ್ಯಳ್ಲಿ. ಸ್ವಲ್ಪಹೊತ್ತು ಗಲಾಟೆ ಆಗ್ತು. ಸಿಕ್ಕಿದ್ದಿಲ್ಲೆ ಅಂದ್ರೆ ನಾವೇ ಹುಡುಕಿದ ಹಾಂಗೆ ಮಾಡಿ ನಂತ್ರಾ ಕೊಟ್ರಾತು'. ಎಲ್ಲರೂ ಯೆಸ್ ಅಂದ್ವಿ.

ರಾತ್ರಿ 12 ಗಂಟೆ ಬಳಿಕ ಕಾರ್ಯಾಚರಣೆ ಶುರು. ಒಬ್ಬೊಬ್ಬರಾಗೇ ಊರು ಮಧ್ಯೆ ಸೇರಿದ್ವಿ. ಸರಿ ಬೈಕನ್ನಾ ಎಲ್ಲಿ ಹುಗಿಸಿಡೋದು ಅಂತಾ ಆಲೋಚನೆ ಮಾಡ್ದಾಗ ಸಿಕ್ಕಿದ್ದು ಆ ಜಾಗ. ನಮ್ಮೂರಿನ ತೋಟದ ಮಧ್ಯೆ ಒಂದು ಚೌಡಿ ಮನೆ. ಅದರ ಪಕ್ಕದಲ್ಲೇ ಚಿಕ್ಕದಾದ ಓಣಿ. ಕಾಂಗ್ರೆಸ್ ಗಿಡದ ಮಟ್ಟಿ ಕವಿದು ಅಲ್ಲಿಗೆ ಹೋಗೋದಿಕ್ಕೂ ಬರದಂತಾ ಜಾಗ. ಅಲ್ಪಸ್ವಲ್ಪ ಹುಡುಕಿದ್ರೆ ಕಾಣೋದೂ ಇಲ್ಲ. ಅಲ್ಲಿ ಇಡೋಣ ಅಂತಾ ತೀರ್ಮಾನ ಆಯ್ತು. ಆ ಬೈಕಾದ್ರೂ ಯೆಷ್ಟು ದೊಡ್ದು ? ಚಿಕ್ಕ ಮೊಪೆಡ್. ಮನಸ್ಸು ಮಾಡಿದ್ರೆ ಒಬ್ಬ ಎತ್ತಿ ಹಿಡಿಬೌದು. ಸರಿ ಬೈಕನ್ನಾ ದೂಡಿಕೊಂಡು ಹೋಗಿ ಅಲ್ಲಿ ಇಟ್ಬಿಟ್ವಿ. ನಂತ್ರ ಪ್ರತಿವರ್ಷದಂತೆ ಯಾರದ್ದೋ ಮನೆಯ ತೋಟದ ಎಳೆನೀರು ಬೂರುಗಳವು ಮಾಡಿ ಕುಡ್ದು ಮಲಗಿಬಿಟ್ವಿ. ಬೆಳಗ್ಗೆ ಎದ್ದು ನೋಡಿದ್ರೆ ಇಷ್ಟು ರಂಪ-ರಾಮಾಯಣ ಆಗ್ಬಿಟ್ಟಿತ್ತು. 

ಸರಿ ಅಂತಾ ಊರವರು ಹುಡುಕೋದಕ್ಕೆ ಹೋದ್ರು. ಆ ಸ್ಥಳವೊಂದನ್ನಾ ಬಿಟ್ಟು ಉಳಿದ ಕಡೆ ನಾವೂ ಹುಡುಕಿದ ಹಾಗೆ ಮಾಡಿದ್ವಿ. ಅದೆಲ್ಲಿ ಕಾಣ್ಬೇಕು. 9 ಗಂಟೆ ತನಕ ಹುಡುಕಿದ್ರೂ ಸಿಗಲೇ ಇಲ್ಲ. ಇತ್ತ ರಾಮಚಂದ್ರಣ್ಣಯ್ಯ ಪಂಜಿ ಉಟ್ಟು, ಹೊಸ ಅಂಗಿ ಹಾಕಿ ಬಂದ್ಬಿಟ್ಟಾ. ಪೊಲೀಸ್ ಕಂಪ್ಲೇಟ್ ಕೊಡ್ತೇನೆ ಅಂತಾ ಪೇಟೆಗೆ ಹೋಗೋದಕ್ಕೆ. ಆಗ ಮತ್ತೂ ಕಂಗಾಲಾದವರ ನಾವು.

ಇದ್ಯೋಕೋ ತಲೆಗೇ ಬರೋಹಾಗಿ ಕಾಣ್ತಿದೆ ಅಂತಾ ನಿಧಾನವಾಗಿ ನನ್ನ ದೊಡ್ಡಪ್ಪನ ಹತ್ರ ಹೋಗಿ 'ಬೈಕನ್ನಾ ನಾವೇ ಹುಗಿಸಿಟ್ಟಿದ್ದು. ಇಂತಲ್ಲಿ ಇದ್ದು. ಯಾರನ್ನಾದ್ರೂ ಕಳಿಸಿ ತರಿಸಿಬಿಡು. ನಾವು ಹೋಗಿ ತಂದ್ರೆ ನಮ್ಮ ಮೇಲೆ ಅನುಮಾನ ಬರ್ತು. ಮೊದಲೇ ನಮ್ಮ ಟೋಳಿ ಕಂಡ್ರೆ ಕಣ್ಣು ಕೆಂಪು ಮಾಡ್ತಾ ಅವಾ,' ಅಂತಾ ಹೇಳಿದ್ವಿ. ಸರಿ ಅಂದಾ ದೊಡ್ಡಪ್ಪ ಯಾರನ್ನೋ ಕಳಿಸಿ ಬೈಕನ್ನಾ ತರಿಸಿದಾ. ಚೌಡಿ ಮನೆ ಹಿಂದಿದ್ದಿದ್ದಕ್ಕೆ ಅದು ಚೌಡಿ ಕಾಟನೇ ಇರ್ಬೇಕು ಅಂತಾ ನಾವು ಕಥೆ ಕಟ್ಬಿಟ್ವಿ. 

ಮುಂದಿನ ದೀಪಾವಳಿಯಲ್ಲಿ ಮಾತ್ರ ರಾಮಚಂದ್ರಣ್ಣಯ್ಯ ಬೈಕನ್ನಾ ಜಗುಲಿ ಮಾಲೆ ತೆಗೆದುಕೊಂಡು ಹೋಗಿ ಇಟ್ಟುಬಿಟ್ಟಿದ್ದಾ. ಆದ್ರೆ ನಾವು ಬಿಡ್ತೀವಾ.? ಕಟ್ಟಿಗೆ ತರಲು ರೆಡಿ ಮಾಡಿಟ್ಟಿದ್ದ ಸಣ್ಣ ಗಾಡಿಯನ್ನಾ ಬೂರುಗಳುವು ಮಾಡ್ಬಿಟ್ಟಿದ್ವಿ.

ಯಾಕೋ ದೀಪಾವಳಿ 2 ದಿನ ಇದೆ ಅನ್ನೋವಾಗ ಇದೆಲ್ಲಾ ನೆನಪಾಯ್ತು. ಪೇಟೆಗೆ ಬರದೇ ಊರಲ್ಲಿ ಉಳಿದಿರೋ ಒಬ್ಬಿಬ್ಬರು ಸ್ನೇಹಿತರಲ್ಲೇ ಒಬ್ಬನಿಗೆ ಪೋನ್ ಮಾಡಿ ಕೇಳ್ದೆ. 'ಈ ವರ್ಷ ಬೂರುಗಳುವು ಏನ್ ಮಾಡವು ಮಾಡಿದ್ರೋ?' ಅಂತಾ. 'ಎಲ್ಲಿ ಬೂರುಗಳುವು ಮಾರಾಯಾ. ಊರಲ್ಲಿ ಉಮೇದಿ ಇದ್ದ ಜನನೇ ಕಾಣ್ತಾ ಇಲ್ಲೆ. ನಿಂಗವೆಲ್ಲಾ ಪೇಟೆ ಸೇರ್ಕ್ಯಂಡಿಗಿದಿ. ಹಬ್ಬದ ದಿನಾ ಬೆಳಿಗ್ಗೆ ಬಂದು ಮರುದಿನ ಬೆಳಿಗ್ಗೆ ವಾಪಸ್ ಓಡ್ ಹೋಗ್ತಿ. ಯಾರ್ ಮಾಡಾಕಾಜು ಬೂರುಗಳುವು' ಅಂದಾ.

ಹೌದು ಹುಡುಗರೆಲ್ಲಾ ಪೇಟೆ  ಸೇರಿದ್ದಾರೆ. ಹಬ್ಬಕ್ಕೆ 2 ದಿನ ಮೊದಲು ಹೋಗೋದಿಕ್ಕೂ ಟೈಮ್ ಇಲ್ಲಾ. ಇದ್ದು ಮುಂಚೆ ಹೋದ್ರೂ ಮೊದಲಿನಂತೆ ತೆಂಗಿನ ಮರ ಹತ್ತೋದಿಕ್ಕೆ ಆಗೋದಿಲ್ಲ. ಸರಿ ರಾಮಚಂದ್ರಣ್ಣಯ್ಯನ ಬೈಕನ್ನೇ ಅಡಗಿಸಿ ಇಡೋಣ ಅಂದ್ರೇ ಅದನ್ನಾ ಗುಜುರಿಗೆ ಹಾಕಿ ಆಗ್ಲೇ 3 ವರ್ಷ ಆಗ್ಬಿಟ್ಟಿದೆ. ಈಗ ಎಲ್ಲಿ ಹಬ್ಬ? ಎಲ್ಲಿಯ ಬೂರುಗಳುವು....? 

2 comments:

  1. ನಿಜ..ಊರಿನ ಹಬ್ಬದ ಉತ್ಸಾಹ..ಸ೦ಭ್ರಮ..ತು೦ಬಾ ಚೆ೦ದ.ಬೇರೆಲ್ಲೂ ಸಿಗದು.

    ReplyDelete
  2. ಆದ್ರೆ ಸಿಟಿಗೆ ಬಂದು ನಾವು ಅದನ್ನೆಲ್ಲಾ ಕಳೆದುಕೊಳ್ತಿದ್ದೇವೆ ಅಲ್ವಾ ? ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete