Wednesday, November 3, 2010


ಗೆಸ್ಟ್ ಕಾಲಂ
ಆ ಸೊಬಗು ಇನ್ನೆಲ್ಲಿ ?
- ಶಿವಶಂಕರ್ ಬ್ಯಾಡಗಿ

ಬೆಳಕಿನ ಹಬ್ಬ ದೀಪಾವಳಿ ಬಂದುಬಿಟ್ಟಿದೆ. ಹಳ್ಳಿಗಳ ಕಡೆ ಅದರ ಸಂಭ್ರಮವೇ ಬೇರೆ. ಆದ್ರು ಇತ್ತೀಚಿಗೆ ಹಳ್ಳಿಗಳಲ್ಲೂ ಹಬ್ಬದ ಸಂಭ್ರಮ ಅಷ್ಟಕಷ್ಟೇ ಆಗೋಗಿದೆ. ಮೊದಲೆಲ್ಲ ಹಬ್ಬಕ್ಕೆ ತಿಂಗಳುಗಳಿಂದ ತಯಾರಿ ನಡೆತಿತ್ತು. ನಮ್ಮಲ್ಲಿ ಅಂದ್ರೆ ಬಯಲುಸೀಮೆ ಕಡೆ ಹೋರಿ ಬೆದರಿಸುವ ಸ್ಪರ್ಧೆಯದ್ದು ಭಾರೀ ಸದ್ದು. ಮೂರು ದಿನಗಳ ಹಬ್ಬದ ಬಳಿಕ ನಾಲ್ಕನೆ ದಿನ ಹೋರಿಗಳಿಗೆ ಕೆಜಿಗಟ್ಟಲೆ ಕೊಬ್ಬರಿ ಕಟ್ಟಿ ಅದಕ್ಕೆ ರಿಬ್ಬನ್ನುಗಳಿಂದ ಸಿಂಗಾರ ಮಾಡಿ ಜನಜಂಗುಳಿಯಿಂದ ತುಂಬಿದ ಪರಿಷೆಯಲ್ಲಿ ಓಡಿಸುವುದೇ ಮಜಾ.

 ಅದಕ್ಕಾಗಿ ತಿಂಗಳುಗಳಿಂದ ಹಗ್ಗ ಹೊಸೆಯುವುದೇನು, ಅವುಗಳಿಗೆ ರಿಬ್ಬನ್ನು ಹಾಗೂ ಜೂಲಗಳನ್ನು ನೇಯುವುದೇನು... ಸ್ಪರ್ಧೆಯಲ್ಲಿ ಕೊರಳಿಗೆ ಕಟ್ಟಿದ ಕೊಬ್ಬರಿಯನ್ನು ಸೇಪಾಗಿ ಪರಿಷೆಯ ಗೆರೆ ದಾಟುವ ಹೋರಿಗಳಿಗೆ ಕೆಲ ತಿಂಗಳುಗಳಿಂದಲೇ ದಷ್ಟಪುಷ್ಟವಾಗಲು ಮೇಯಿಸಲಾಗುತ್ತೆ. 
 
 
ಇನ್ನು ಪಾಡ್ಯದ ದಿನ ಬೆರಣಿಯಿಂದ ತಯಾರಿಸಿದ ಹಟ್ಟಿಲಕ್ಕವಳ್ಳಿಗೆ ಫಲಪುಷ್ಪಗಳನ್ನು ಇಟ್ಟು ಸಿಂಗರಿಸಲಾಗುತ್ತೆ. ಇದಕ್ಕಾಗಿ ಬೆಳಿಗ್ಗೆಯೇ ಎದ್ದು  ಕಾಡುಗಳಲ್ಲಿ ಸಿಗುವ ವಿವಿಧ ಬಗೆಯ ಹೂವುಗಳು, ಗೇರು ಸೇರಿದಂತೆ ಫಲವನ್ನು ತರುವುದೇ ಒಂದು ಚಂದ.. ಇನ್ನು ಅಮವಾಸ್ಯೆ ದಿನ ಪ್ರತಿಯೊಬ್ಬರ ಮನೆಮುಂದೆ ಮರದ ತುಂಡೊಂದನ್ನು ತಂದು ಪೂಜಿಸುತ್ತಾರೆ. ಹೀಗೆ ದೀಪಾವಳಿ ಎಂದರೆ ಸಡಗರ ಸಂಭ್ರಮ.. ಜೊತೆಗೆ ಕೆಲಸವೋ ಕೆಲಸ. ವರ್ಷವಿಡಿ ದುಡಿಯುವ ರೈತರು ತಮ್ಮೆಲ್ಲಾ ಕೃಷಿ ಸಾಮಗ್ರಿಗಳನ್ನು ಸ್ವಚ್ಚವಾಗಿ ತೊಳೆದು ಪೂಜಿಸುತ್ತಾರೆ. ಇದಕ್ಕಾಗಿ ಸಂಪೂರ್ಣ ಮನೆ, ಹಿತ್ತಲ ಸೇರಿದಂತೆ ಮನೆಯ ಮುಂದಣ ಅಂಗಳವನ್ನು ಸ್ವಚ್ಚಗೊಳಿಸಿ ಸಿಂಗಾರಗೊಳಿಸುತ್ತಾರೆ. ಇನ್ನು ದನದ ಕೊಟ್ಟಿಗೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ರಿಪೇರಿ ಮಾಡುತ್ತಾರೆ. ಅದಕ್ಕೆ ಗೊಚ್ಚು ಹಾಕಿ ಬಿದ್ದಿರುವ ಗುಂಡಿಗಳನ್ನು ಮುಚ್ಚುತ್ತಾರೆ.

ಆದ್ರೆ ಹಳ್ಳಿಗಳು ನಗರೀಕರಣದ ಗಾಳಿಗೆ ಸಿಲುಕುತ್ತಿರುವುದು ಹಬ್ಬಕ್ಕೆ ಕೊಂಚ ನಿರಾಸೆ ಮೂಡಿಸಿದೆ. ಈಗ್ಗೆ 10 ವರ್ಷಗಳ ಹಿಂದೆ ಇದ್ದ ಆ ಸಡಗರ, ಜನತೆಯಲ್ಲಿ ಇದ್ದ ಉತ್ಸಾಹ ಈಗೀಗ ಕಾಣುತ್ತಿಲ್ಲ. ಹತ್ತು ಹಲವು ದಿನಗಳಿಂದ ಇದ್ದ ಆ ತುಡಿತ ಕಾಣುವುದೇ ಇಲ್ಲ. ಹೊಸಬಟ್ಟೆ ತೊಟ್ಟು, ಮೊದಲ ದಿನ ಬೆಳ್ಳಂ ಬೆಳಿಗ್ಗೆಯೇ ಎದ್ದು ಕುದಿಯುವ ನೀರಲ್ಲಿ ಎಣ್ಣೆ ಸ್ನಾನ ಮಾಡುವ ಆ ಮಜಾನೇ ಬೇರೆ.

ಈಗೀಗ ಕೆಲಸಕ್ಕಾಗಿ ಮೆಟ್ರೋ ಪಾಲಿಟಿನ್ ಸಿಟಿ ಸೇರಿದ ಎಷ್ಟೋ ಯುವಕರಿಗೆ ದೀಪಾವಳಿ ಹಬ್ಬದ ಸವಿಯನ್ನು ಸವಿಯಲೇ ಆಗುತ್ತಿಲ್ಲ.  ದುಷ್ಟಶಕ್ತಿಗಳನ್ನು ನಾಶ  ಮಾಡುವ, ಕತ್ತಲೆಯನ್ನು ಹೊಡೆದೊಡಿಸಿ ಜೀವನದಲ್ಲಿ ಬೆಳಕು ನೀಡುವ ಹಬ್ಬ ನೀಜವಾಗಲೂ ಈಗ ಕಳೆಗುಂದುತ್ತಿದೆ. ಇನ್ನೊಂದು ದುಃಖಕರ ವಿಷಯ ಅಂದ್ರೆ, ನಮ್ಮೂರು ಕೆರವಡಿಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಅಂದ್ರೆ ಅದೊಂದು ಭಾರೀ ವಿಶೇಷತೆ. ಆದ್ರೆ ಅದೀಗ ಮಾಯವಾಗ್ತಿದೆ. ಒಂದೇ ಸಮುದಾಯದ ಎರಡು ಪಂಗಡಗಳ ಜಗಳ, ಸಂಪ್ರದಾಯಕ್ಕೆ ಎರವಾಗಿದೆ. ಊರಿನಲ್ಲಿದ್ದ ಸಾಮರಸ್ಯ, ಹಟ್ಟಿ ಹಬ್ಬ ಎಂಬ ವೈಭದ ಹಬ್ಬವನ್ನೇ ಹಾಳು ಮಾಡಿಹಾಕಿದೆ. ಒಂದೆಡೆ ಆಧುನೀಕರಣ, ಮತ್ತೊಂದೆಡೆ ನಗರೀಕರಣ ಹಾಗೂ ಒಳಪಂಗಡಗಳಲ್ಲಿನ ಹೊಡೆದಾಟ ಹಬ್ಬದ ಮಹತ್ವವನ್ನು ಮೊಟಕುಗೊಳಿಸಿರುವುದು ಬೇಸರದ ಸಂಗತಿ.
  
ದೀಪಾವಳಿ ಬಂದ ಕೂಡಲೇ ಆಕಾಶ ಬುಟ್ಟಿಗಳು ಎಲ್ಲೆಡೆ ಕಂಡು ಬರುತ್ತವೆ. ಇನ್ನೂ ಹದಿನೈದು ದಿವಸ ಬಾಕಿ ಇರುವಾಗಲೇ ಅಂಗಡಿಯ ಬಾಗಿಲಲ್ಲಿ ತರತರದ ಗೂಡು ದೀಪಗಳು ನೇತಾಡತೊಡಗುತ್ತವೆ. ಪೇಟೆಯ ಬೀದಿಯಲ್ಲಿ ಸುತ್ತಾಡುತ್ತಾ ಹೋದಾಗ ಇಂತಹಾ ಒಂದು ಆಕಾಶಬುಟ್ಟಿಯನ್ನು ಕೊಂಡೊಯ್ದು ಮನೆಯ ಮುಂದೆ ನೇತಾಡಿಸಿ ಅದರ ಒಳಗೆ ಬಣ್ಣ ಬಣ್ಣದ ಲೈಟು ಹಾಕಿ ಸಂಭ್ರಮಿಸಬೇಕು ಎಂದು ಅನಿಸುತ್ತದೆ. ಒಂದೆರಡು ದಶಕಗಳ ಹಿಂದೆ  ಆಕಾಶಪಟ್ಟಿಗಳು ಅಂಗಡಿಗಳ ಮುಂದೆ ನೇತಾಡುತ್ತಿರಲಿಲ್ಲ. ದೀಪಾವಳಿಯ ಸಂದರ್ಭದಲ್ಲಿ ಮನೆ ಮುಂದೆ ಒಂದು ಆಕಾಶಬುಟ್ಟಿಯನ್ನು  ನೇತಾಡಿಸಬೇಕು ಎಂದು ಅನಿಸಿದರೆ ಅದಕ್ಕಾಗಿ ಒಂದೆರೆಡು ವಾರಗಳ ತಯಾರಿ ಅತ್ಯಗತ್ಯವಾಗಿತ್ತು. ಮನೆಯಲ್ಲೇ ನೀರ್ಮಿಸಿದ ಆಕಾಶಬುಟ್ಟಿಗಳನ್ನು ತಯಾರಿಸಿ, ಅದರಲ್ಲಿ ಲೈಟುಗಳನ್ನು ಬಿಟ್ಟು ಸಂಭ್ರಮಿಸಲಾಗುತಿತ್ತು. ಆದರೆ ಅವನ್ನೀಗ ಮನೆಯಲ್ಲೇ ನಿರ್ಮಿಸುವ ಪುರುಸೋತ್ತಾದರೂ ಯಾರಿಗೆ ಇದೆ.

ನಮ್ಮಲ್ಲಿ ಇನ್ನೊಂದು ಆಚರಣೆ ಇದೆ. ಬಲಿ ಪಾಡ್ಯಮಿ ದಿನ ಹಟ್ಟಿಲೆಕ್ಕವನಿಗೆ ಪೂಜೆ ಸಲ್ಲಿಸಿ, ಊಟವಾದ ಬಳಿಕ ಪಂಜು ಸುಡುವುದು. ಅಂದು ಮನೆ ಮುಂದೆ ಸುಡುವ ಪಂಜು ಹಾಗೂ ಪಂಜನ್ನು ಹಿಡಿದು ಓಡುವುದೇ ಚಂದಾ.. ಆದ್ರೀಗ ಅದು ಸಹ ನಿಂತು ಹೋಗಿದೆ. ಅದಕ್ಕಾಗಿ ಊರುವಲು ಸಂಗ್ರಹಿಸುವುದೇ ನಿಂತುಹೋಗಿದೆ. ಕಾಡಿಗೆ ಹೋಗಿ ಪಂಜು ಕಡಿದುಕೊಂಡು ಬರುವುದೇ ಕಷ್ಟ. ಈಗೇನಿದ್ದರು, ಸುಡುಮದ್ದುಗಳ ದರ್ಬಾರು. ಅವುಗಳ ಮುಂದೆ ಈ ಪಂಜಿನ ಬೆಳಕು ಮಂದವಾಗಿದೆ. ಒಟ್ಟಾರೆ ಆಧುನಿಕ ದೀಪಾವಳಿ ಎದುರು ಸಾಂಪ್ರದಾಯಿಕ ಆಚರಣೆ ಮಂಕಾಗುತ್ತಿದೆ.

No comments:

Post a Comment