Thursday, September 16, 2010

ಮುಗ್ದ ಮನಸ್ಸಿಗೆ ಒಂದೇ ಮುಖ...

 - ಅಶ್ವತ್ಥ ಕೋಡಗದ್ದೆ
ಇವತ್ತಿಗೂ ಅಷ್ಟೇ.. ಹಾರ್ಮೊನಿಯಂ ಸ್ವರ ಕೇಳಿದ ಕೂಡ್ಲೇ ಮೊದಲು ನೆನಪಾಗೋದು ಸಣಕಲು ದೇಹದ ರಾಮಚಂದ್ರ ಮತ್ತು ಸಂಗೀತದ ಬೆಲೆ ವಿಂದ್ವಾಂಸಗರಿಗಷ್ಟೇ ಗೊತ್ತು ಸ್ವಾಮಿ ಎಂಬ ಆತನ ಮಾತು....

ಆವತ್ತು ಮಧ್ಯಾಹ್ನ ಊಟ ಮುಗಿಸಿದವನು ನಡುಮನೆಯಲ್ಲಿ ಮಲಗಿದ್ದೆ. ನಮ್ಮ ಹಳ್ಳಿ ಮನೆಗಳಲ್ಲಿ ಗೊತ್ತಲ್ಲ... ಊಟ ಮುಗಿಸಿ ಕೈ ತೊಳೆದವರೇ ಹೆಬ್ಬಾಗಲಿಗೊಮ್ಮೆ  ಬರುವುದು, ಬೇಕು ಅನ್ನಿಸಿದರೆ ಬಾಯಿಗೆ ಒಂದು ಕವಳ ತುಂಬುವುದು, ಅದು ನುಗ್ಗಾದ ಕೂಡಲೇ ಉಗುಳಿ, ಹೋಗಿ ಮಲಗಿಬಿಡೋದು. ಅರ್ಧ-ಮುಕ್ಕಾಲು ಗಂಟೆ ಅಷ್ಟೇ..... ಮತ್ತೆ ಎಲ್ಲರೂ ಅಂಡುಕೊಕ್ಕೆ ಸುತ್ತಿ ಕೆಲಸಕ್ಕೆ ಹೊರಟುಬಿಡ್ತಾರೆ. ವಾಪಾಸ್ಸಾಗೋದು ಸಂಜೆ ಆರರ ನಂತರವೇ.
ಇನ್ನು ಮಲಗಿ 10 ನಿಮಿಷ ಆಗಿತ್ತಷ್ಟೇ. ನಿದ್ದೆ ಜಂಪು ಹತ್ತಬೇಕು. ಹೆಬ್ಬಾಗಿಲಿನಲ್ಲಿ ಯಾರೋ ಜೋರಾಗಿ ಹಾಡೋದಕ್ಕೆ ಆರಂಭಿಸಿದ್ರು. ಮಲಗಿದಲ್ಲೇ ಅಸಹನೆಯಿಂದ ಮಗ್ಗಲು ಬದಲಿಸುತ್ತಾ ಅಮ್ಮಾ ಅವಂಗೆ ಸಂಭಾವನೆ ಕೊಟ್ಟು ಕಳಿಸ್ತ್ಯಾ, ಎಂಥಾ ನಿದ್ರೆ ಹಾಳು ಗೊಣಗಿದೆ. 
ಪಾಪ ಪ್ರತೀ ವರ್ಷ ಬರುವವ ಅವಾ.... ಹಾಡ್ಲಿ ಬಿಡು, 2 ನಿಮಿಷ ಹಾಡಿಕ್ಕೆ ಸಂಭಾವನೆ ಇಸ್ಕೊಂಡು ಹೋಗ್ತಾ, ಅಡಿಕೆ ಕೊಟ್ರೂ ಅರ್ಧಕ್ಕೆ ಹಾಡದನ್ನಾ ಬಿಟ್ಟಿಕ್ಕೆ ಹೋಗವಲ್ಲಾ ಅವಾ ಅಂದ್ಲು ಅಮ್ಮಾ. ಅರೇ ಇವ ಯಾರಪ್ಪಾ !? ನೋಡಿಯೇ ಬಿಡೋಣ ಅಂತಾ ಹೆಬ್ಬಾಗಿಲಿಗೆ ಹೋದೆ.
ಕೈಯಲ್ಲಿ ಸಿಂಗಲ್ ಬಾತೆ ಹಾರ್ಮೊನಿಯಂ, ತಲೆಗೊಂದು ಮಾಸಿದ ಮುಂಡಾಸು, ಬಗಲಲ್ಲಿ ಜೋಳಿಗೆ, ಮೆಟ್ಟಿಲ ತುದಿಗೆ ಕುಳಿತ ಬಡಕಲು ಶರೀರ. ಎಡಗೈ ಲಯಬದ್ದವಾಗಿ ಹಾರ್ಮೊನಿಯಂನ ಬಾತೆ ಹಾಕ್ತಿದ್ರೆ ಬಲಗೈಯಲ್ಲಿರೋ 5 ರೂಪಾಯಿ ನಾಣ್ಯವೇ ತಾಳವೆನೋ  ಎಂಬಂತೆ  ಕಟಕಟ ಸದ್ದು ಮಾಡ್ತಿತ್ತು. ಬಾಯಲ್ಲಿ ರಾಯರ ಭಜನೆ- ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರಾssss.
ಹಾಡು ಮುಗಿಸಿ ಕಣ್ಣು ಬಿಟ್ಟವನೇ ಎದುರಿಗಿದ್ದ ನನ್ನನ್ನು ನೋಡಿ ನಮಸ್ಕಾರ ಒಡೆಯಾ ಚೆನ್ನಾಗಿದ್ದೀರಾ? ಅಂದಾ. ಚೆನಾಗಿದ್ದೇನೆ. ಆದ್ರೆ ಇದು ಅಡಿಕೆಕೊಯ್ಲು ಸೀಜನ್ ಅಲ್ಲವಲ್ಲಯ್ಯಾ... ಮತ್ತೆ ಈಗ ಬಂದಿದೀಯಾ ಸಂಭಾವನೆಗೆ ನಾನಂದೆ. ಏನು ಮಾಡೋದು ಸ್ವಾಮಿ. ವರ್ಷದಲ್ಲಿ ಒಂದು ಕಿತಾ ಮಾತ್ರ ಬರೋದು...ಈ ವರ್ಷ ವಸಿ ಲೇಟಾಯ್ತು..ಎಷ್ಟಾದ್ರೂ ಸರಸ್ವತಿ ಸೇವೆ ಅಲ್ವುರಾ.. ಏನೋ ನೀವು ಕವಳಕ್ಕೆ ಅಂತಾ ಇಟ್ಟುಕೊಂಡಿದ್ರಲ್ಲೇ  ಎರಡು ಅಡಿಕೆ ಕೊಡಿ.... ಸರಿ ನಾಲ್ಕು ಅಡಿಕೆ ತಂದುಕೊಡೋಣ ಅಂತಾ ಎದ್ದು ಹೊರಟೆ. ಅಷ್ಟರಲ್ಲೇ ಅಲ್ಲಿಗೆ ಬಂದ ನನ್ನ ಅಪ್ಪಯ್ಯ ಏನೋ ರಾಮಚಂದ್ರ ಎಲ್ಲಾದ್ರೂ ತಬಲಾಕ್ಕೆ ಒಳ್ಳೆ ಕರುಣಾ ಹಾಕುವವರು ಇದ್ದಾರೆನೋ ಅಂದ್ರು.
ನಿಮ್ಮನ್ಯಾಗೆ ತಬಲಾನೂ ಐತಾ ಬುದ್ದಿ…! ಸರಸ್ವತಿ ಬುದ್ದಿ ಅದು. ಆದ್ರೆ ಪ್ಯಾಟೆಯವರ ಹತ್ರಾ ಮಾತ್ರ ಕರುಣಾ ಹಾಕ್ಸಬೇಡಿ. ಎಲ್ಲಾ ದುಡ್ಡಿನಾ ಆಸೆಗೆ ಬಿದ್ಬುಟ್ಟವ್ರೆ. ಎರಡೇ ದಿನಕ್ಕೆ ಕರುಣಾ ಹಾರಿ ಹೋಗ್ತದೆ. ಸರಸ್ವತಿ ತಾಯಿಯ ಸೇವೆ ಅಂತಾ ಕೆಲಸ ಮಾಡೋರು ಯಾರೂ ಇಲ್ಲಾ ಈಗಾ. ಸಂಗೀತದ ಬೆಲೆ ವಿದ್ವಾಂಸರಿಗಷ್ಟೇ ಗೊತ್ತು ಅಲ್ವಾ ಸ್ವಾಮಿ. ತಂಪು ಹೊತ್ತಲ್ಲಿ ಹಾಡಿದ್ರೆ ಸಂಗೀತಾ ಅಂತಾರೆ... ಇಂಥಾ ಮಟಮಟಾ ಮಧ್ಯಾಹ್ನದ ಬಿಸ್ಲಲ್ಲಿ ಹಾಡಿದ್ರೆ ಸಂಗೀತಾ ಅನ್ಸಿಕೊಳ್ತದಾ.. ಆದ್ರೆ ಏನು ಮಾಡೋದು ಹೊಟ್ಟೆ ಪಾಡು. ಆ ತಾಯಿ ನಡೆಸಿದ ಹಾಗೆ ನಡೆಯೋದು. ಯಾವಾಗ ಹಾಡು ಅಂತಾಳೋ ಆಗ ಹಾಡೋದು... ಒಂದು ಸಣ್ಣ ನಿಟ್ಟುಸಿರು ಹೊರಬಂತು.
ಹ್ಹಾ… ಕರುಣಾ ಹಾಕ್ಸೋ ಸುದ್ಧಿ ಕೇಳ್ತಿದ್ರಿ ಅಲ್ವಾ… ಇಟಗಿ ದೇವಸ್ಥಾನದ ಹಿಂದೆ ಒಬ್ಬ ಇದಾನೆ ನೋಡ್ರಿ. ವಯಸ್ಸಾದ ಮುದುಕಾ. ಅವಾ ಚೆನ್ನಾಗಿ ಹಾಕ್ತಾನೆ. ಇಲ್ಲಾಂದ್ರೆ ಘಟ್ಟದ ಕೆಳಗೆ ಹೊತ್ಕಂಡು ಹೋಗೋದೆಯಾ.’ ಇಷ್ಟು ಹೇಳ್ದವನೇ ನಾಲ್ಕು ಅಡಿಕೆ 2 ರೂಪಾಯಿ ಇಸ್ಕಂಡು ಹಾರ್ಮೊನಿಯಂ ಪೆಟ್ಟಿಗೆ ಹೆಗಲಿಗೆ ಏರಿಸಿ ಬರ್ಲಾ ಸ್ವಾಮಿ ಅಂತಾ ಪಕ್ಕದ ಮನೆಗೆ ಹೋದಾ.
ಅಲ್ಲಿ ಆತ ಹಾಡುತ್ತಿದ್ದ ಅಂಬಿಗ ನಾನಿನ್ನ ನಂಬಿದೆ... ಹಾಡು ಅಲೆಅಲೆಯಾಗಿ ಕಿವಿಗೆ ಬಂದು ತಾಗ್ತಿತ್ತು. ಆದರೆ ಮನಸ್ಸಿನಲ್ಲಿ ಉಳಿದದ್ದು ಮಾತ್ರ ಒಂದೇ ಮಾತು- ಸಂಗೀತದ ಬೆಲೆ ವಿದ್ವಾಂಸರಿಗಷ್ಟೇ ಗೊತ್ತು ಅಲ್ವಾ ಸ್ವಾಮಿ...

7 comments:

  1. nice one brother...........keep it up.

    ReplyDelete
  2. to Ratnamala Hegde

    ಪ್ರೋತ್ಸಾಹಕ್ಕೆ ಧನ್ಯವಾದಗಳು

    ReplyDelete
  3. to kavita hegde & ನನ್ನೊಳಗಿನ ಕನಸು
    ಪ್ರತಿಕ್ರಿಯೆಗೆ ಧನ್ಯವಾದಗಳು... ಪ್ರೋತ್ಸಾಹ ಹೀಗೇ ಇರಲಿ... ಅದು ನಮಗೆ ಸ್ಫೂರ್ತಿ ನೀಡಲಿ...

    ReplyDelete
  4. Howdu... Sangeethada bele vidvamsarigashte gotthu... Adu maamooli janakke kelavomme kiri kiri annisabahudu.... But i am asking ashwath whether it was a real incident...

    ReplyDelete
  5. to sandesh
    ಸಂದೇಶ್, ನಿಜವಾಗಿ ನಡೆದದ್ದು ಇದು. ನಮ್ಮ ಮನೆಯಲ್ಲೇ... ಇವತ್ತಿಗೂ ನಾನು ಆ ರಾಮಚಂದ್ರನನ್ನ ವಿಚಾರಸ್ತಾ ಇದ್ದೇನೆ. ಆದ್ರೆ ಎಲ್ಲಿದ್ದಾನೆ ಗೊತ್ತಿಲ್ಲ...

    ReplyDelete