Sunday, September 19, 2010

ಲಾಭದ ಲೆಕ್ಕಾಚಾರದಲ್ಲಿ ವಾಸ್ತವ ಮರೆತವರು...


 - ವಿನಾಯಕ ಹೆಗಡೆ

ದರ ಕಥೆನೇ ಬೇಡ. ರೇಟಿಲ್ಲಾ, ಏನೂ ಇಲ್ಲಾ.. ಅದನ್ನಾ ಇಟ್ಗೊಂಡು ಮಾಡೋದಾದ್ರೂ ಏನು.? ಲಾಭವಾದ್ರೂ ಏನಿದೆ..? ಸುಮ್ನೆ ಕೆಲಸಾ ಮಾತ್ರ ಜಾಸ್ತಿ... ಹೀಗೆ ತಲೆಬುಡವಿಲ್ಲದ ಅವನ ಸಿಟ್ಟು ಎಲ್ಲೆ ಮೀರಿತ್ತು. ಸರಿಯಪ್ಪಾ ನೀನು ಸಿಟ್ಟು ಮಾಡ್ಕೊಳ್ತಾ ಇದ್ದಿದ್ದು ಯಾವುದರ ಮೇಲೆ ? ಸಿಟ್ಟಾದ್ರೂ ಯಾಕೆ ? ಅದನ್ನಾ ಹೇಳ್ಬಿಟ್ಟು ಸಿಟ್ಟು ಮಾಡ್ಕ ಮಾರಾಯಾ,.. ನಾನಂದೆ. ಇನ್ಯಾವುದರ ಮೇಲೆ.. ಆ ಹಾಳಾದ ವೆನಿಲ್ಲಾ ಮೇಲೆ... ರಾಕ್ಷಸ ಜಾತಿದು, ಎಷ್ಟು ಕಿತ್ರೂ ಸಾಯೋದೇ ಇಲ್ಲಾ.. ಸಣ್ಣ ಕುಡಿ ಇದ್ರೂ ಸಾಕು ಚಿಗುರಿಕೊಂಡು ಬಿಡುತ್ತೆ. ರಕ್ತ ಬೀಜಾಸುರನಂತಾದ್ದು... ಮತ್ತಷ್ಟು ಗರಂ ಆಗ್ಬಿಟ್ಟ. ತೋಟದಲ್ಲಿ ಇದ್ದ ಕೊನೇ ಬಳ್ಳಿಯನ್ನೂ ಕಿತ್ತಾಕಿದೀನಿ ಅಂತಾ ಹೇಳಿ ಸ್ವಲ್ಪ ನಿರಾಳನಾದ. 


ವೆನಿಲ್ಲಾ ಹಸಿ ಬೀನ್ಸ್ ಕೆಜಿಗೆ 3 ಸಾವಿರ ಇದ್ದ ಕಾಲವನ್ನ ನೋಡಿದವನು ಅವ್ನು. ಅದು 2 ಸಾವಿರಕ್ಕೆ ಬಂದಾಗ ಅಷ್ಟೆನೂ ಬೇಜಾರಾಗಿರ್ಲಿಲ್ಲಾ. ಎರಡು ವರ್ಷದೊಳಗೆ ಒಮ್ಮೆಲೆ ಬೆಲೆ ಬಿತ್ತು ನೋಡಿ, ಯಾವುದೋ ಪ್ರಮಾದವೇ ಆಯ್ತೇನೋ ಎಂಬಂತೆ ಆಗ್ಬಿಟ್ಟಿದೆ ಅವ್ನಿಗೆ. ಇದು ಅವನೊಬ್ಬನ ಸಿಟ್ಟಲ್ಲ. ವೆನಿಲ್ಲಾ ಬೆಳೆದ ಬಹುತೇಕರ ಮನಸ್ಥಿತಿ ಹೀಗೇ ಆಗ್ಬಿಟ್ಟಿದೆ.

ಹಾಗಾದ್ರೆ ವೆನಿಲ್ಲಾದ ಬೆಲೆ ಇಷ್ಟು ಕಡಿಮೆಗೆ ಇಳಿದದ್ದು ಬೆಳೆಗಾರರಿಗೆ ನಷ್ಟವುಂಟು ಮಾಡಿದೆಯಾ.? ಅದನ್ನು ಬೆಳೆಯಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರಾ.? ಒಂದು ವೇಳೆ ಬೆಳೆದ್ರೂ ಅದರಿಂದ ನಷ್ಟ ಆಗ್ತಿದೆಯಾ ? ಸರಿಯಾಗಿ ಯೋಚ್ನೆ ಮಾಡಿದ್ರೆ ಇವತ್ತು ಮಲೆನಾಡ ತೋಟದಲ್ಲಿ ಇರೋ ಬೆಳೆಗಳ ಪೈಕಿ ವೆನಿಲ್ಲಾಕ್ಕೆ ಉತ್ತಮ ಬೆಲೆ ಇದೆ. ಕೆ. ಜಿಗೆ 150 ರೂಪಾಯಿ, ಅಂದ್ರೆ ಕ್ವಿಂಟಾಲ್ ಗೆ 15 ಸಾವಿರ ರೂಪಾಯಿ. ಮತ್ಯಾವ ಬೆಳೆಗೆ ಈ ರೇಟು ಇದೆ ಹೇಳಿ. ಯಾಲಕ್ಕಿ, ಕಾಳುಮೆಣಸಿಗೆ ಸ್ವಲ್ಪ ಈ ಬೆಲೆ ಇದ್ರೂ ಎಷ್ಟೋ ಜನರ ಮನೆಯ ತೋಟದಲ್ಲಿ ಅವಿಲ್ಲ. ಒಂದೋ ಕಟ್ಟೆರೋಗ ಬಂದು ಅವು ಸತ್ತುಹೋಗಿವೆ. ಅಥವಾ ಕೆಲವರು ವೆನ್ನಿಲ್ಲಾ ಭರಾಟೆಯಲ್ಲಿ ಅವುಗಳನ್ನಾ ಕಿತ್ತೆಸೆದುಬಿಟ್ಟಿದ್ದಾರೆ. 


ಮಲೆನಾಡಿನ ಮೂಲ ಬೆಳೆ ಎನಿಸಿಕೊಂಡ ಅಡಿಕೆಗೇ ಇಂದು ಸ್ಥಿರ ಬೆಲೆ ಇಲ್ಲ. ಇವತ್ತು ಇದ್ದ ದರ ನಾಳೆ ಇದ್ದೇ ಬಿಡುತ್ತೆ ಅನ್ನೋ ನಂಬಿಕೆ ಇಲ್ಲಾ. ಜೊತೆಗೆ ಅದಕ್ಕೆ ತಗುಲೋ ಖರ್ಚು...? ಕೂಲಿ ಆಳುಗಳು ಸಿಗುತ್ತಿಲ್ಲ. ಸಿಕ್ರೂ ಕೂಲಿ ದರ ಹೆಚ್ಚಾಗಿದೆ. ಮರ ಹತ್ತಿ ಗೊನೆ ಕೊಯ್ಯುವವರು ಕಡಿಮೆಯಾಗಿದ್ದಾರೆ. ಇತ್ತೀಚೆಗೆ ಹೊಸಬರು ಈ ಕೆಲಸ ಆರಂಭಿಸಿದರೂ ಅವರಿಗೆ ಆ ಸ್ಕಿಲ್ ಇಲ್ಲ. ಇಷ್ಟೆಲ್ಲಾ ಆಗಿ ಅಡಿಕೆಗೊನೆ ಮನೆಬಾಗಿಲಿಗೆ ತಂದು ಹಾಕಿದ್ರು ಅಂತಾದ್ರೂ ಅದನ್ನು  ಸುಲಿಯುವವರದ್ದು ಮತ್ತೂ ದೊಡ್ಡ ಸಮಸ್ಯೆ. ಅಡಿಕೆ ಬೇಯಿಸು,. ಅದನ್ನು ಅಟ್ಟದಮೇಲೆ ಹಾಕಿ ಒಣಗಿಸು.. ಹೀಗೆ ನೂರೆಂಟು ಕೆಲಸಗಳು. ಅಡಿಕೆ ರೆಡಿಯಾಗಿ ಮಾರಲು ಸಿದ್ಧವಾಗುವ ಹೊತ್ತಿಗೆ ಬೆಳೆದವರು ಹೈರಾಣಾಗಿಬಿಡುತ್ತಾರೆ. ಆದರೆ ಲಾಗಾಯ್ತಿನಿಂದಲೂ ಅದನ್ನೇ ಮಾಡ್ತಾ ಬಂದಿದ್ದರಿಂದ ಅವರಿಗೆ ಏನೂ ಅನ್ನಿಸುತ್ತಿಲ್ಲವೆನೋ...!



ಆದರೆ ವೆನಿಲ್ಲಾಕ್ಕೆ ಇಷ್ಟೊಂದು ಸಮಸ್ಯೆಯಾದರೂ ಎಲ್ಲಿದೆ.? ಮರ ಹತ್ತಬೇಕಿಲ್ಲ, ಕೂಲಿಗಳನ್ನೇ ನೆಚ್ಚಿಕೊಳ್ಳಬೇಕಿಲ್ಲ. ಪರಾಗಸ್ಪರ್ಶ ಮಾಡಿದರಾಯ್ತ, ಹಸಿ ಬೀನ್ಸ್ ಬೆಳೆದ ನಂತರ ಕೊಯ್ದು ಮಾರಿದರಾಯ್ತು. ಇಷ್ಟಾಗ್ಯೂ ಹಸಿಬೀನ್ಸ್ ಗೆ ಅಡಿಕೆಗಿಂತ ಅಥವಾ ಅಡಿಕೆಯಷ್ಟೇ ದರ ಇದೆ. ಒಂದು ಕ್ವಿಂಟಾಲ್ ಅಡಿಕೆ ಸಂಸ್ಕರಿಸಿ ತಯಾರು ಮಾಡೋದಕ್ಕೆ ಅದರ ಬೆಲೆಯ ಅರ್ಧದಷ್ಟು ಖರ್ಚು ತಗುಲುತ್ತೆ. ಆದ್ರೆ ವೆನಿಲ್ಲಾಕ್ಕೆ ಅದರ ಬೆಲೆಯ ಶೇಕಡಾ 25 ರಷ್ಟೂ ಖರ್ಚಿಲ್ಲ. ಆದರೂ ನಮ್ಮ ರೈತರಿಗೆ ಇದು ತೃಪ್ತಿ ನೀಡ್ತಿಲ್ಲ. ಯಾಕೆಂದ್ರೆ  ಅವ್ರು ಆರಂಭದಲ್ಲೇ ಮೂರು ಸಾವಿರ ರೂಪಾಯಿ ಬೆಲೆ ನೋಡ್ಬಿಟ್ಟಿದ್ದಾರೆ. ಈಗ 150 ರೂಪಾಯಿಗೆ ಇಳಿದಿದೆ ಅನ್ನೋದನ್ನಾ ಅರಗಿಸಿಕೊಳ್ಳೋ ಸ್ಥಿತಿಯಲ್ಲಿಲ್ಲಾ. ಕೇವಲ ದರ ಇಳಿಕೆಯನ್ನು ಮಾತ್ರ ವಿಚಾರ ಮಾಡ್ತಿದ್ದಾರೆ ವಿನಃ ಈಗಿರುವ ದರದಲ್ಲೂ ವೆನ್ನಿಲ್ಲಾ ಎಷ್ಟು ಲಾಭದಾಯಕ ಅನ್ನೋದನ್ನಾ ಯೋಚನೆ ಮಾಡ್ತಿಲ್ಲಾ.  ಸರಿ ಈ ರೇಟಿನಲ್ಲಿ ಹೊಸದಾಗಿ ವೆನಿಲ್ಲಾ ನೆಡೋದು ಬೇಡ. ಆದ್ರೆ ಇದ್ದ ವೆನಿಲ್ಲಾವನ್ನೇ ಸರಿಯಾಗಿ ಬೆಲೆಸಿಕೊಂಡು ಹೋಗ್ಬಹುದಲ್ಲಾ. ಅಷ್ಟು ಮಾಡ್ಕೊಂಡು ಹೋದ್ರು ಲಾಭ ಇದ್ದೇ ಇದೆ.  

ಇದನ್ನೆಲ್ಲಾ ಕೂಗಾಡುತ್ತಿದ್ದ ಆ ವ್ಯಕ್ತಿ ಎದುರು ಹೇಳ್ಬೇಕು ಅನ್ಕೊಂಡೆ. ಆದ್ರೆ ಕೇಳುವ ವ್ಯವದಾನ ಅವನಲ್ಲಿ ಕಾಣಲಿಲ್ಲ.

3 comments:

  1. ವೆನಿಲಾ ಬಗ್ಗೆ ನಾನಂತೂ ಉಪೇಕ್ಷೆ ಮಾಡಿಲ್ಲ. ಈಗ ವೆನಿಲಾ ಬಳ್ಳಿ ತೋಟದಲ್ಲಿ ರೋಗ ಬಂದು ನಾಶವಾಗುತ್ತಿದೆ.
    ಒಳ್ಳೆಯ ಬರಹಕ್ಕೆ ಧನ್ಯವಾದಗಳು.

    ReplyDelete
  2. to Jagadeesh Belehadda
    ಪ್ರಾಕೃತಿಕವಾಗಿ ಬೆಳೆ ನಾಶ ಅನ್ನೋದು ಎಲ್ಲಾ ಕಡೆ ಇದ್ದಿದ್ದೇ. ಅದರ ಹೊರತಾಗಿಯೂ ಕೆಲವರು ವೆನಿಲ್ಲಾವನ್ನು ಬುಡ ಸಮೇತ ಕಿತ್ತು ಹಾಕುತ್ತಿದ್ದಾರೆ. ಅವರಿಗೆ ಏನು ಹೇಳೋಣ ಹೇಳಿ...? ಇನ್ನು ಕೆಲವು ನಿಮ್ಮಂತೆ ವೆನಿಲ್ಲಾ ಬೆಳೆಯುವುದನ್ನು ಮುಂದುವರಿಸಿದ್ದಾರೆ....
    ಪ್ರತಿಕ್ರಿಯೆಗೆ ಧನ್ಯವಾದಗಳು. ಪ್ರೋತ್ಸಾಹ ಹೀಗೇ ಇರಲಿ.....

    ReplyDelete
  3. ಹೊಸದೊಂದು ಖಾದ್ಯದ ರುಚಿ ನೋಡಿದವನಿಗೆ ಪದೇ ಪದೇ ಅದೇ ಬೇಕೆನಿಸುತ್ತಲ್ಲ ಹೆಗಡೆರೆ! ನಮ್ಮ ಕಥೆ ಆಗಿದ್ದೂ ಅದೇ! ಕೇ.ಜಿ ಗೆ 5 ಸಾವಿರದವರೆಗೂ ಏರಿದ ಬೆಲೆಯ ರುಚಿ ನೋಡಿದವನಿಗೆ 150ರೂ. ಯಾವ ಲೆಕ್ಕ? ನಿಜ ಹೇಳಬೇಕೆಂದರೆ, ನಮ್ಮಲ್ಲಿ ಇಂದಿಗೂ ವೆನಿಲ್ಲಾ ಬಳ್ಳಿಗಳಿವೆ. ಪುರುಸೊತ್ತಾದಾಗ ಪಾಲಿನೇಶನ್ ಮಾಡಿ ಸೊಂಪಾಗಿ ಬೆಳೆದ ಬೀನ್ಸ್ ಗಳೂ ಇವೆ. ಮಾರ್ಕೆಟ್? ವೆನಿಲಾ ಇದೆ ತಗೋಳ್ತೀರಾ ಅಂತ ಕೇಳಿದರೆ ಯಾವುದೋ ತಿರುಕನನ್ನು ನೋಡಿದಂತೆ ಆಡ್ತಾರೆ ಖರೀದಿದಾರರು! ಯಾರಿಗೇಳಾಣಾ ನಮ್ ಪ್ರಾಬ್ಲೆಮ್ಮು?

    ReplyDelete